ಕಾಂಗ್ರೆಸ್ ನಲ್ಲಿ ಬಣ ಬಡಿದಾಟ:ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ- ಅಶೋಕ್

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಕಾದಾಟ ನಡೆಯುತ್ತಿರುವುದರಿಂದ ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಸಚಿವರಾದ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳಕರ್‌ ನಡುವೆ ಕಲಹವಿದ್ದರೆ, ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್‌-ಸಚಿವ ಜಾರಕಿಹೊಳಿ ನಡುವೆ ಕಲಹವಿದೆ. ಎರಡೂವರೆ ವರ್ಷಕ್ಕೆ ಅಧಿಕಾರ ಹಸ್ತಾಂತರವಾಗಬೇಕೆಂದು ಒಪ್ಪಂದವಾದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಲು ಮನಸ್ಸಿಲ್ಲ,ಅದಕ್ಕಾಗಿ ಸಚಿವರನ್ನು ಛೂ ಬಿಟ್ಟಿದ್ದು, ಡಿ.ಕೆ.ಶಿವಕುಮಾರ್‌ ಒಬ್ಬಂಟಿಯಾಗಿದ್ದಾರೆ,ಹಾಗಾಗಿ ಅವರು ಹೈಕಮಾಂಡ್‌ ಪಾದದ ಬಳಿ ಕೂತಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಸಿದ್ಧರಿಲ್ಲ.ಎಲ್ಲರೂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ಇದೆಲ್ಲದರಿಂದಾಗಿ ಯಾರೂ ಜನರ ಪರವಾಗಿ ಮಾತಾಡುತ್ತಿಲ್ಲ. ಗುತ್ತಿಗೆದಾರರು ದಯಾಮರಣಕ್ಕೆ ಕೋರಿದ್ದರೆ, ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಾಗುತ್ತಿದೆ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆಯಾಗಿದೆ ಎಂದು ಗುಡುಗಿದರು.

ಆರ್‌ಎಸ್‌ಎಸ್‌ ಸರಸಂಘಚಾಲಕರಾದ ಮೋಹನ್‌ ಭಾಗವತ್‌ ಅವರ ಬಗ್ಗೆ ಕಾಂಗ್ರೆಸ್‌ ನಾಯಕರು ಟೀಕೆ ಮಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ನಾನು ಕೂಡ ಭಾಗವಹಿಸಿದ್ದೆ. ಮಂದಿರ ನಿರ್ಮಾಣ ಎಂದರೆ ಮತ್ತೊಂದು ಸ್ವಾತಂತ್ರ್ಯ ಹೋರಾಟ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಯಾವ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ, ಇಂದಿರಾಗಾಂಧಿ ತಂದ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವೇ ಒಂದು ಸ್ವಾತಂತ್ರ್ಯ ಸಂಗ್ರಾಮ. ಆ ಸಂಗ್ರಾಮದಲ್ಲಿ ಜನಸಂಘದ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್‌ನವರು ಯಾವ ಹೋರಾಟ ಮಾಡಿದ್ದಾರೆ ಎಂದು ತಿಳಿಸಲಿ ಎಂದು ಅಶೋಕ್ ಒತ್ತಾಯಿಸಿದರು.

ಕೇಂದ್ರ ಸರ್ಕಾರ ಜನಗಣತಿ ನಡೆಸುತ್ತಿರುವಾಗ ಕಾಂಗ್ರೆಸ್‌ ಸರ್ಕಾರ ಜಾತಿ ಗಣತಿ ವರದಿಯ ಬಗ್ಗೆ ಮಾತಾಡುತ್ತಿದೆ. ಜಾತಿ ಗಣತಿ ವರದಿಯನ್ನು ಬೀದಿಬೀದಿಯಲ್ಲಿ ಜನರು ನೋಡಿದ್ದಾರೆ. ಅದು ಈಗಾಗಲೇ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಹೇಳಿ ಬರೆಸಿರುವ ವರದಿ ಇದಾಗಿದ್ದು, ಯಾವುದೇ ರಹಸ್ಯ ಉಳಿದಿಲ್ಲ.ಎಲ್ಲರೂ ಒಪ್ಪುವಂತೆ ಜಾತಿ ಗಣತಿ ವರದಿ ತಯಾರಿಸಬೇಕು,ಒಕ್ಕಲಿಗರು ಹಾಗೂ ಲಿಂಗಾಯತರ ಸಂಖ್ಯೆ ಜಾಸ್ತಿ ಬರಬಾರದೆಂಬ ಕಾರಣಕ್ಕೆ ಬೇಕೆಂದೇ ಮನಬಂದಂತೆ‌‌ ವರದಿ ತಾಯಾರಾಗಿದೆ ಎಂದು ದೂರಿದರು.