ಕೆ.ಆರ್.ಪೇಟೆ ಬಸ್ ನಿಲ್ದಾಣಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ದಿಢೀರ್ ಭೇಟಿ!

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಬಸ್ ನಿಲ್ದಾಣಕ್ಕೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ದಿಢೀರ್ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಯಾಣಿಕರನ್ನು ಮಾತನಾಡಿಸಿ ಮಾಹಿತಿ ಪಡೆದರು.

ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಮಾತನಾಡಿಸಿ ಬಸ್ ವ್ಯವಸ್ಥೆಯ ಬಗ್ಗೆ ವಿಚಾರಿಸಿದರು.

ಆಗ ಹಲವು ವಿದ್ಯಾರ್ಥಿನಿಯರು ತಮ್ಮ ಊರಿಗೆ ಸರಿಯಾಗಿ ಬಸ್ ಸಂಪರ್ಕ ಇಲ್ಲ, ಹಾಗಾಗಿ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ನಮ್ಮ ಊರಿಗೆ ಸರಿಯಾಗಿ ಬಸ್ ಸಂಪರ್ಕ ಕಲ್ಪಿಸಿಕೊಡಿ ಎಂದು ಮನವಿಮಾಡಿದರು.

ಅನೇಕ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇದ್ದರೂ ಕೆಲವು ಕಡೆ ಬಸ್ ಚಾಲಕರು ವಾಹನ ನಿಲ್ಲಿಸುತ್ತಿಲ್ಲ ಎಂದು ದೂರಿದರು.

ತಕ್ಷಣ ಮಂಡ್ಯ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಅಧ್ಯಕ್ಷೆ ಸೂಚಿಸಿದರು.

ಬಸ್ ನಿಲ್ದಾಣದಲ್ಲಿ ತಾಯಿ ಮಗುವಿನ ಕೊಠಡಿ ಇಲ್ಲದಿರುವುದನ್ನು ಕಂಡು ಪ್ರತಿ ಬಸ್ ನಿಲ್ದಾಣದಲ್ಲಿ ತಾಯಿ ಮಗುವಿನ ಕೊಠಡಿ ಇರಬೇಕು ತಾಯಿ ಮಗುವಿನ ಕೊಠಡಿ ಏಕೆ ನಿರ್ಮಿಸಿಲ್ಲ ಎಂದು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

ಮಹಿಳಾ ವಿಶ್ರಾಂತಿ ಕೊಠಡಿಗೆ ಭೇಟಿ ನೀಡಿ ಕೊಠಡಿಯ ಶುಚಿತ್ವ ಗಮನಿಸಿ, ಸ್ವಚ್ಚತಾ ಸಿಬ್ಬಂದಿಗೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಸರಿಯಾಗಿ ಕಾರ್ಯ ನಿರ್ವಹಿಸಿ ಎಂದು ಹೇಳಿದರು.

ನಂತರ ಶೌಚಾಲಯಕ್ಕೂ ಭೇಟಿ ನೀಡಿ ಪರಿಶೀಲಿಸಿ ದರು. ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ,ಆದರೆ ಸ್ವಚ್ಛತೆ ಕಾಪಾಡುವು ದಿಲ್ಲ ಎಂದು ಪ್ರಯಾಣಿಕರು ಆರೋಪಿಸಿದರು.

ಸಂಬಂಧಪಟ್ಟ ಸ್ವಚ್ಚತಾ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಮಹಿಳೆಯರಿಂದ ಹಣ ವಸೂಲಿ ಮಾಡಬಾರದು ಹಾಗೂ ಶೌಚಾಲಯಕ್ಕೆ ಸೂಕ್ತ ಬಾಗಿಲುಗಳ ವ್ಯವಸ್ಥೆ ಇರಬೇಕು ಸ್ವಚ್ಚತೆಯನ್ನು ಸರಿಯಾಗಿ ನಿರ್ವಹಣೆ ಮಾಡಿ ಎಂದು ಡಾ.ನಾಗಲಕ್ಷ್ಮಿ ಚೌಧರಿ ಆದೇಶಿಸಿದರು.

ಇದಕ್ಕೂ ಮೊದಲು ಡಾ.ನಾಗಲಕ್ಷ್ಮಿ ಚೌಧರಿ ಅವರು ಕೆ.ಆರ್.ಪೇಟೆ ತಾಲ್ಲೂಕು ಗುರುಭವನದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.

ಮಹಿಳೆಯರು ತಮ್ಮ ವಿರುದ್ಧ ಅನ್ಯಾಯ ನಡೆದ ಸಂದರ್ಭದಲ್ಲಿ ಭಯವಿ ಲ್ಲದೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ದೈರ್ಯ ತುಂಬಿದರು.