ಬೆಂಗಳೂರು: ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು,ಜನರ ರಕ್ಷಣೆ ಮಾಡುವವರೇ ಇಲ್ಲದಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಕರ್ನಾಟಕ ದರೋಡೆ ರಾಜ್ಯವಾಗಿ ಬದಲಾಗಿದ್ದು, ಜನರು ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್‌ನಲ್ಲಿ ಬ್ಯಾಂಕ್‌ನ ಹಣ ದರೋಡೆ ಹಾಗೂ ಸಿಬ್ಬಂದಿ ಕೊಲೆ ನಡೆದಿದೆ. ಮಂಗಳೂರಿನಲ್ಲಿ ಹಾಲಿವುಡ್ ಸಿನಿಮಾ ಶೈಲಿಯಲ್ಲಿ 15 ಕೋಟಿ ರೂ. ಬ್ಯಾಂಕ್ ಹಣ ಲೂಟಿಯಾಗಿದೆ. ರಾಜ್ಯದ ಪೊಲೀಸರ ಬಗ್ಗೆ ಯಾರಿಗೂ ಭಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪೊಲೀಸ್ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ,ರಾಜ್ಯದ ಕಾನೂನು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ರಾಜ್ಯಗಳಿಂದ ಕಳ್ಳರು ಬಂದು ದರೋಡೆ ಮಾಡಿಕೊಂಡು ಬಸ್ಸು, ರೈಲಿನಲ್ಲಿ ಹೋಗುತ್ತಿದ್ದಾರೆ. ಜನರು ಅವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ, ಪೊಲೀಸರ ಕೈಯಲ್ಲಿ ಪಿಸ್ತೂಲ್ ಇಲ್ಲ, ಆದರೆ ದರೋಡೆ ಮಾಡುವವರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿವೆ ಇದೆಂತಹ ವಿಪರ್ಯಾಸ ಎಂದು ಟೀಕಾಪ್ರಹಾರ ನಡೆಸಿದರು.
ಲವ್ ಜಿಹಾದ್, ಕೋಮುಗಲಭೆ, ಹಸುಗಳ ಕೆಚ್ಚಲು ಕತ್ತರಿಸಿದ್ದು ಮೊದಲಾದ ಘಟನೆಗಳ ವಿರುದ್ಧ ಕಠಿಣ ಕ್ರಮ ವಹಿಸಲಿಲ್ಲ. ಪೊಲೀಸ್ ಇಲಾಖೆ ವರ್ಗಾವಣೆ ದಂಧೆಯಲ್ಲಿ ತೊಡಗಿದೆ, ಅಧಿಕಾರಿಗಳು ಸಾಯುತ್ತಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಇಲಾಖೆಯ ಸಭೆ ಕರೆದು ಮಾತನಾಡಿಲ್ಲ. ಡಿ.ಕೆ.ಶಿವಕುಮಾರ್-ಸತೀಶ್ ಜಾರಕಿಹೊಳಿ ಗಲಾಟೆ, ಸಿಎಂ ನಿರ್ಗಮನ ಮೊದಲಾದ ರಾಜಕೀಯದಲ್ಲೇ ಸರ್ಕಾರ ಮುಳುಗಿದೆ ಎಂದು ಗುಡುಗಿದರು.
ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ, ಸಿಎಂ ಸಿದ್ದರಾಮಯ್ಯ ಎಷ್ಟು ಅನುದಾನ ನೀಡಿದ್ದಾರೆ ಎಂದು ಶ್ವೇತಪತ್ರ ಬಿಡುಗಡೆ ಮಾಡಲಿ. ಬಿಜೆಪಿ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ, ಕಾಂಗ್ರೆಸ್ ಅವಧಿಯಲ್ಲಿ 60 ವರ್ಷಗಳಲ್ಲಿ ಎಷ್ಟು ಸಾಲ ಮಾಡಲಾಗಿದೆ ಎಂದು ಕೂಡ ತಿಳಿಸಲಿ ಎಂದು ಅಶೋಕ್ ಆಗ್ರಹಿಸಿದರು.
ಮುಡಾಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ನನಗೆ ಉತ್ತರ ನೀಡಿಲ್ಲ. ಲೋಕಾಯುಕ್ತ ಪೊಲೀಸರು ತನಿಖೆ ಮಾಡಲು ಆಸಕ್ತಿ ತೋರದೆ ಕ್ಲೀನ್‌ಚಿಟ್ ನೀಡಲು ಸಿದ್ಧತೆ ಮಾಡಿಕೊಂಡಿರುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ ಅಶೋಕ್,ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಹೇಳಿದರು.