ನಟ ದರ್ಶನ್‌ ಗನ್‌ ಲೈಸೆನ್ಸ್‌ ತಾತ್ಕಾಲಿಕ ಅಮಾನತು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ದಯಾನಂದ್‌ ತಿಳಿಸಿದ್ದಾರೆ.

ಮೂರು ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಬಹುದಾದ ಕೇಸ್‍ನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಳಿ ಲೈಸೆನ್ಸ್ ಇರುವ ಗನ್ ಇದ್ದರೆ ಅದನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ಅಲ್ಲದೇ ಆ ವ್ಯಕ್ತಿಯ ಲೈಸೆನ್ಸ್ ರದ್ದು ಮಾಡಬಹುದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ ಲೈಸೆನ್ಸ್ ಗನ್ ಬಳಕೆ ಮಾಡಿರುವುದು ಎಲ್ಲಿಯೂ ಕಂಡುಬರದ ಕಾರಣ ತಾತ್ಕಾಲಿಕವಾಗಿ ಅಂದರೆ ಕೇಸ್ ಮುಗಿಯುವತನಕ ಅಮಾನತ್ತಿನಲ್ಲಿಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಲು ಈಗಾಗಲೇ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್‍ನಲ್ಲಿ, ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್ ಇರುವುದರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‍ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.

ಪೊಲೀಸರ ನೋಟಿಸ್‍ಗೆ ಉತ್ತರಿಸಿದ್ದ ದರ್ಶನ್, ನಾನು ಸೆಲೆಬ್ರಿಟಿ ಆಗಿರುವುದರಿಂದ ಆತ್ಮರಕ್ಷಣೆಗೆ ಗನ್ ಅವಶ್ಯಕತೆ ಇದೆ. ನನ್ನ ಮೇಲಿರುವ ಕೇಸ್‍ನ ಸಮಯದಲ್ಲಿ ಆ ಗನ್ ಬಳಕೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಗನ್ ದುರ್ಬಳಕೆ ಮಾಡಿಕೊಳ್ಳುವುದಿಲ್ಲ, ಹಾಗಾಗಿ ಗನ್ ಲೈಸೆನ್ಸ್ ಮುಂದುವರೆಸಿ ಎಂದು ಮನವಿ ಮಾಡಿದ್ದರು.