ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ಸೈಟ್‌ಗಳ ಬಗೆಗಿನ ಲೋಕಾಯುಕ್ತ ತನಿಖೆ ಅಂತಿಮ ಹಂತ ತಲುಪಿದೆ.
ಮುಡಾದಲ್ಲಿ ಲೋಕಾಯುಕ್ತ ಅಧಿಕಾರಿಗಳು, ಕೆಲ ಆಡಿಯೋ ಹಾಗೂ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಪ್ರಕರಣದ ವರದಿಯನ್ನು ನ್ಯಾಯಾಲಯಕ್ಕೆ ನೀಡಲು ಲೋಕಾಯುಕ್ತಕ್ಕೆ ಜ. 27 ಕೊನೆಯ ದಿನವಾಗಿದ್ದು, ಲೋಕಾಯುಕ್ತ ಪೊಲೀಸರು ಕೊನೆಯ ಹಂತದ ವಿಚಾರಣೆ ಕೈಗೊಂಡಿದ್ದಾರೆ.
50:50 ಅನುಪಾತದ ಸೈಟು ಹಂಚಿಕೆ ವಿಚಾರದಲ್ಲಿ ಮುಡಾ ಸದಸ್ಯರ ಅಭಿಪ್ರಾಯ ಏನಾಗಿತ್ತು ಎಂಬ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಮುಡಾ ಕಚೇರಿಗೆ ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ನೇತೃತ್ವದ ತಂಡ ಭೇಟಿ ನೀಡಿ, 50:50 ಅನುಪಾತದ ಬಗ್ಗೆ ಚರ್ಚೆಯಾದ ಸಭೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, 2020ರ ನ.11ರಂದು ನಡೆದ ಸಭೆ ನಡಾವಳಿ ಪರಿಶೀಲಿಸಿ ಅಂದಿನ ಸಭಾ ನಡವಳಿ, ಧ್ವನಿ ಸುರಳಿ ಕೇಳಿಸಿಕೊಂಡು ಅದರ ಮಾಹಿತಿಯನ್ನೂ ದಾಖಲಿಸಿಕೊಂಡಿದೆ.
ಅಂದಿನ ಸಭೆಯಲ್ಲಿ ಮಾಜಿ ಆಯುಕ್ತ ನಟೇಶ್ ಹಾಗೂ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಇದ್ದ ಅವಧಿಯ ಸಭೆ ಆಡಿಯೋ ಇದಾಗಿದ್ದು ಅಂದಿನ ಸಭೆಯಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಶಾಸಕ ತನ್ವೀರ್ ಸೇಠ್, ಜಿ.ಟಿ ದೇವೇಗೌಡ, ಎಸ್.ಎ ರಾಮ್‌ದಾಸ್, ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿ ಹಲವು ಪ್ರಮುಖರು ಭಾಗಿಯಾಗಿದ್ದರು.
ಸಭೆಯಲ್ಲಿ 50 : 50 ಅನುಪಾತ ಚರ್ಚೆ ನಡೆದಿತ್ತು. ಹಾಗಾಗಿ ಇದರ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.