ಜೀವರರಕ್ಷಕ ವಾಹನಗಳಿಗೂ ಕಂಟಕವಾದ ಒಕ್ಕಣೆ!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಅಪಾಯ ಲೆಕ್ಕಿಸದೆ ತಾಲ್ಲೂಕಿನ ವಿವಿಧೆಡೆ ರಸ್ತೆಗಳ ಮೇಲೆ ವಿವಿಧ ಬೆಳೆಗಳ ಒಕ್ಕಣೆ ನಡೆಯುತ್ತಿದ್ದು, ವಾಹನ ಚಾಲಕರು, ಪ್ರಯಾಣಿಕರ ಸಂಚಾರಕ್ಕೆ ಕಂಟಕವಾಗಿದೆ, ಜೊತೆಗೆ ಜೀವರಕ್ಷಕ ವಾಹನಗಳಿಗೂ ಅಪಾಯ ಎದುರಾಗಿದೆ.

ಜಿಲ್ಲೆಯ ತಾಲ್ಲೂಕಿನಾದ್ಯಂತ ಈಗ ಭತ್ತ, ಹುರುಳಿ, ರಾಗಿ ಒಕ್ಕಣೆ ಜೋರಾಗಿದೆ. ಜಮೀನಿನಲ್ಲಿ ಕಣ ನಿರ್ಮಿಸಿ ಬೆಳೆ ರಾಶಿ ಮಾಡಿ, ಒಕ್ಕಣೆ ಮಾಡಿದ ರೈತರು ಅಲ್ಲಿಂದ ಧಾನ್ಯಗಳನ್ನು ಮನೆಗೆ ತರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲೇ ಒಕ್ಕಣೆ ಮಾಡುವ ಸುಲಭ ಮಾರ್ಗ ಕಂಡುಕೊಂಡಿದ್ದಾರೆ.

ಕೆಲವು ಕಡೆ ರೈತರು ಯಂತ್ರಗಳನ್ನು ಬಳಸಿಕೊಂಡು ಒಕ್ಕಣೆ ಮಾಡಿದರೆ, ಇನ್ನು ಕೆಲವು ಕಡೆ ದೊಡ್ಡದಾದ ಟಾರ್ಪಲ್‌ಗಳಲ್ಲಿ ಒಕ್ಕಣೆ ಮಾಡುತ್ತಾರೆ. ಇನ್ನು ಕೆಲವರು ರಸ್ತೆ ಮಧ್ಯ ಭಾಗದಲ್ಲೇ ಭತ್ತ, ರಾಗಿ, ಹುರುಳಿ ಹಾಕುತ್ತಾರೆ. ವಾಹನಗಳು ಅದರ ಮೇಲೆ ಚಲಾಯಿಸುತ್ತಾರೆ. ಜನರು ಓಡಾಡುವ, ವಾಹನ ದಟ್ಟಣೆ ಇರುವ ರಸ್ತೆ ಮಧ್ಯದಲ್ಲೇ ಧಾನ್ಯ ಹಾಕಿ ಟ್ರಾಕ್ಟರ್‌ ನೆರವು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ.

ಯಂತ್ರೋಪಕರಣ ಅವಲಂಬಿಸಿದ ಮೇಲೆ ಕೆಲ ರೈತರು ಹೊಲದಲ್ಲಿ ಒಕ್ಕಣೆ ಕಣ ಮಾಡುವುದನ್ನು ಬಿಟ್ಟಿದ್ದಾರೆ. ಇದಲ್ಲದೆ ಉಳುಮೆ ಮಾಡಲು ಈಗ ಎತ್ತು, ದನ-ಕರು ಸಾಕುತ್ತಿಲ್ಲ. ಹೀಗಾಗಿ, ರಸ್ತೆಯ ಮೇಲೆ ಒಕ್ಕಣೆ ಮಾಡುತ್ತಿದ್ದಾರೆ ಎಂದು ಊರಿನ ಕೆಲ ಹಿರಿಯರು ಹೇಳುತ್ತಾರೆ.

ಒಕ್ಕಣೆ ಮಾಡುವ ರೈತರು ಭತ್ತ, ರಾಗಿ ಹಾಗೂ ಹುರುಳಿಯಂಥ ಬೆಳೆಗಳನ್ನು ರಸ್ತೆಯಲ್ಲಿ ಎತ್ತರವಾಗಿ ಹಾಕುತ್ತಾರೆ. ಇವು ವಾಹನಗಳ ಚಕ್ರಕ್ಕೆ ಸಿಲುಕಿಕೊಳ್ಳುತ್ತವೆ. ಆಗ ಸವಾರರ ಗೋಳು ಕೇಳುವುದೇ ಬೇಡ. ಇನ್ನು ದ್ವಿಚಕ್ರ ವಾಹನಗಳಂತೂ ಮುಂದೆ ಸಾಗುವುದೇ ಕಷ್ಟ. ಧೈರ್ಯವಾಗಿ ಮುನ್ನುಗ್ಗಿದರೆ ಒಕ್ಕಣೆಯಿಂದ ಏಳುವ ದೂಳು ಕಣ್ಣಿಗೆ ಬೀಳುತ್ತದೆ. ದೂಳಿನಿಂದಾಗಿ ಮುಂದಿನ ಹಾದಿಯೂ ಸರಿಯಾಗಿ ಕಾಣುವುದಿಲ್ಲ ಆಯತಪ್ಪಿ ಕೆಳಗೆ ಬೀಳುವಂತಾಗಿದೆ ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ‌

ಗ್ರಾಮಾಂತರದಲ್ಲೇ ಹೆಚ್ಚು: ಒಕ್ಕಣೆ ಮಾಡಲು ರೈತರು ಗ್ರಾಮಾಂತರ ಪ್ರದೇಶ ಹಾಗೂ ಹೆಚ್ಚು ಜನನಿಬಿಡ ಪ್ರದೇಶವಲ್ಲದ ರಸ್ತೆಗಳನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ತಾಲ್ಲೂಕಿನ ದಾಸನೂರು, ಮೇಲಾಜಿಪುರ, ಅಮಚವಾಡಿ ಅರಕಲವಾಡಿ ಸೇರಿದಂತೆ ವಿವಿಧ ಗ್ರಾಮಗಳ ರಸ್ತೆಗಳ ಮೇಲೆ ರಾಗಿ, ಭತ್ತ ಹಾಗೂ ಹುರುಳಿ ಸೇರಿದಂತೆ ಇತರ ಆಹಾರ ಧಾನ್ಯಗಳನ್ನು ಒಕ್ಕಣೆ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಹುರುಳಿ ಸೆತ್ತೆಯ ಮೇಲೆ ತ್ರಿಚಕ್ರ ವಾಹನ ಚಲಿಸುತ್ತಿರುವಾಗ ಎಂಜಿನ್‌ಗೆ ಸಿಲುಕಿಕೊಂಡು ಬೆಂಕಿ ಕಾಣಿಸಿಕೊಂಡ ಉದಾಹರಣೆ ಇನ್ನೂ ಹಸಿರಾಗಿದೆ.

ಜೊತೆಗೆ ರಾತ್ರಿ ವೇಳೆ ಒಕ್ಕಣೆ ಮಾಡಿ ಟಾರ್ಪಲನ್ನ ರಸ್ತೆಯಲ್ಲಿ,ರಸ್ತೆ ಬದುವಿನಲ್ಲೂ ಮುಚ್ಚಿ ಹೋಗಿದ್ದರಿಂದ ಅದರ ಮೇಲೆ ದ್ವಿಚಕ್ರ ವಾಹನ ಚಲಿಸಿ ಸವಾರನೊಬ್ಬ ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ.

ತುರ್ತು ವಾಹನಕ್ಕೂ ಕಂಟಕ: ತುರ್ತು ವಾಹನಗಳು ಗಾಯಾಳುಗಳು ಹಾಗೂ ಇತರ ಸಂದರ್ಭದಲ್ಲಿ ರೋಗಿಗಳನ್ನುಆಸ್ಪತ್ರೆಗೆ ಕರೆ ತರುವಾಗ ರಸ್ತೆ ಒಕ್ಕಣೆಯಿಂದ ಪರದಾಡಬೇಕಾಗಿದೆ.

ಕೆಲವೊಮ್ಮೆ ಒಕ್ಕಣೆಗಳಲ್ಲಿ ಬೆಂಕಿ ಕಾಣಿಸಿಕೊಂಡು ವಾಹನ ಸುಟ್ಟುಹೋದ ಉದಾಹರಣೆಯೂ ಇದೆ.

ಹುರುಳಿ ಸತ್ತೆಯಿಂದ ಆಕ್ಸೆಲ್ ಸುತ್ತಿಕೊಂಡಾಗ ಇದನ್ನ ಬಿಡಿಸಲು ಗಂಟೆಗಟ್ಟಲೆ ಪರದಾಡಬೇಕಾದ ಸ್ಥಿತಿ ಎದುರಾಗುತ್ತದೆ,ಆವಾಗ ವಾಹನದಲ್ಲಿ ಇರುವ ರೋಗಿಗಳ ಜೀವಕ್ಕೆ ಮಾರಕವಾದರೆ ಹೊಣೆ ಯಾರು? ಇದರಿಂದ ಕೆಟ್ಟ ಹೆಸರು ನಮಗೂ ಬರುತ್ತದೆ ಎನ್ನುತ್ತಾರೆ ತುರ್ತು ವಾಹನ ಚಾಲಕರು.

ಕೇವಲ ಚಾಮರಾಜನಗರ ಜಿಲ್ಲೆಯಲ್ಲಷ್ಟೆ ಅಲ್ಲ ಹಲವು ಜಿಲ್ಲೆಗಳಲ್ಲಿಯೂ ಇದೆ ಸಮಸ್ಯೆ ಇದೆ. ದಯಮಾಡಿ ಆಯಾಯ ಜಿಲ್ಲಾಡಳಿತ ಎಚ್ಚೆತ್ತು ಅನಾಹುತವಾಗುವುದನ್ನ ತಪ್ಪಿಸಿ ಜನರ ಪ್ರಾಣ ರಕ್ಷಣೆಗೆ ಮುಂದಾಗಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಕಣ ನಿರ್ಮಾಣಕ್ಕಾಗಿ ಗ್ರಾಮೀಣಾ ಭಿವೃದ್ಧಿ ಇಲಾಖೆಯು ಸಹಾಯ ಧನ ಘೋಷಿಸಿದೆ. ಆದರೂ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಈಗಾಗಲೇ ನಿರ್ಮಿಸಿಕೊಂಡಿರುವ ಕಣಗಳೂ ಸದ್ಬಳಕೆಯಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸ ಬೇಕಿದೆ,ಅಲ್ಲದೆ ಈ ಸಂಬಂಧ ಪೊಲೀಸರು ಸೂಕ್ತ ಕ್ರಮ ವಹಿಸಬೇಕಿದೆ.