ಮೈಸೂರು: ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ. 26 ರಿಂದ 31ರವರೆಗೆ ಆರು ದಿನಗಳ ಕಾಲ ಸುತ್ತೂರಿನಲ್ಲಿ ನಡೆಯಲಿದೆ.
ಜಾತ್ರೆ ಬಗ್ಗೆ ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಎಸ್.ಪಿ ಮಂಜುನಾಥ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜ. 27ರಂದು ಸಾಮೂಹಿಕ ವಿವಾಹ ಹಾಲರವಿ ಉತ್ಸವ 28ರಂದು ರಥೋತ್ಸವ, 29ರಂದು ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷದೀಪೋತ್ಸವ, 30ರಂದು ತೆಪ್ಪೋತ್ಸವ, 31ರಂದು ಅನ್ನ ಬ್ರಹ್ಮೋತ್ಸವ ಜೊತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿದೆ ಎಂದು ತಿಳಿಸಿದರು.
27ರಂದು ನಡೆಯುವ ಉಚಿತ ಸಾಮೂಹಿಕ ವಿವಾಹ ದಲ್ಲಿ ಒಟ್ಟು 156 ಜೋಡಿ ಸತಿಪತಿಗಳಾಗಲಿದ್ದಾರೆ ಎಂದು ಅವರು ತಿಳಿಸಿದರು.
ಸತಿಪತಿಗಳಾಗುವವರಲ್ಲಿ ತಮಿಳುನಾಡಿನ 18 ಜೋಡಿ 3 ವಿಶೇಷ ಚೇತನ ಜೋಡಿ ಹಾಗೂ ಒಂದು ಅಂತರ್ಜಾತಿ ಜೋಡಿ ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ ಎಂದು ಮಂಜುನಾಥ್ ಅವರು ಹೇಳಿದರು.
ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು ಹಾಗೂ ಗಣ್ಯರು ಅಲ್ಲದೆ ವಿವಿಧ ಮಠಗಳ ಮಠಾಧೀಶ್ವರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಬಾರಿ ಅತ್ಯಾಕರ್ಷಕವಾದ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು ಇದು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ ಉತ್ಪನ್ನಗಳ ಮಾರಾಟವನ್ನು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜ. 31ರಂದು ರಾಷ್ಟ್ರಮಟ್ಟದ ನಾಡಕುಸ್ತಿ ಪಂದ್ಯಾವಳಿ ನಡೆಯಲಿದೆ. ಈ ಬಾರಿ ಎರಡು ಮಾರ್ಪಿಟ್ ಕುಸ್ತಿಗಳು ನಡೆಯಲಿವೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ಸುತ್ತೂರು ಕೇಸರಿ ಪ್ರಶಸ್ತಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ಸುತ್ತೂರು ಕುಮಾರ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಆಡಳಿತಾಧಿಕಾರಿ ಉದಯ್ ಶಂಕರ್ ಉಪಸ್ಥಿತರಿದ್ದರು.