ಸಂವಿಧಾನವೆಂದರೆ ಆಳುವ ಪ್ರಮುಖ ನಿಯಮಗಳ ಸಂಯೋಜನೆ – ಸಚಿವ ಹೆಚ್.‌ ಸಿ. ಮಹದೇವಪ್ಪ

ಮೈಸೂರು: ಸಂವಿಧಾನವೆಂದರೆ ಆಳುವ ಪ್ರಮುಖ ನಿಯಮಗಳ ಸಂಯೋಜನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.‌ ಸಿ. ಮಹದೇವಪ್ಪ ತಿಳಿಸಿದರು.

ಮೈಸೂರಿನ ಬನ್ನಿ ಮಂಟಪದಲದಲಿರುವ ಪಂಜಿನ ಕವಾಯತು ಮೈದಾನದಲ್ಲಿ ಭಾನಿವಾರ ಏರ್ಪಡಿಸಲಾಗಿದ್ದ ೭೬ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಚಿವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಂವಿಧಾನ ದೇಶದ ಅತ್ಯುನ್ನತ ಮೂಲಭೂತ ಶಾಸನದ ನಿರೂಪಣೆ ಹಾಗೂ ಸರ್ಕಾರದ ಕಾರ್ಯವೈಖರಿಯ ಮೂಲ ಸೆಲೆಯಾಗಿದೆ. ಒಂದು ರಾಜ್ಯ ಕ್ರಮಬದ್ದವಾಗಿ ಜನರಿಗೆ ಹಿತವೆನಿಸುವ ರೀತಿಯಲ್ಲಿ ನಿರಾಂತಕವಾಗಿ ಆಡಳಿತ ನಡೆಸಲು ಸಂವಿಧಾನ ಅತ್ಯವಶ್ಯಕ ವಾಗಿದೆ ಎಂದವರು ಹೇಳಿದರು.

ಜನರಿಂದ, ಜನರಿಗಾಗಿ, ಜನರೇ ನಡೆಸುವ ಆಡಳಿತ ಹೊಂದಿರುವ ವಿನೂತನ ಗಣತಂತ್ರ ವ್ಯವಸ್ಥೆಯಲ್ಲಿ ಎಲ್ಲಾ ಜಾತಿ, ಧರ್ಮ, ಭಾಷೆಗಳಿಗೂ ಸಮಾನ ಗೌರವ, ಸಮಾನ ಮಾನ್ಯತೆ ಇದೆ ಎಂದು ಸಚಿವ ಮಹದೇವಪ್ಪನವರು ತಿಳಿಸಿದರು.

ಹಲವಾರು ಭಾಷೆ, ಧರ್ಮಗಳನ್ನು ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ನಮ್ಮ ಸಂವಿಧಾನದ ವಿಶೇಷ. ಇಂತಹ ಅತ್ಯುತ್ತಮ ವ್ಯವಸ್ಥೆಯಲ್ಲಿ ನಾವು ಹಲವಾರು ಸುಧಾರಣೆಗಳನ್ನು ತಂದಿದ್ದೇವೆಂದರು.

ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹತ್ವಕಾಂಕ್ಷಿ ಯೋಜನೆ ಅನ್ನ ಭಾಗ್ಯ ಯೋಜನೆ. ಈ ಯೋಜನೆಯನ್ನು ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಜನಸಮಾನ್ಯರ ಆಹಾರ ಭದ್ರತಾ ವಿಷಯದಲ್ಲಿ ಒಂದು ಮೈಲಿಗಲ್ಲು ಎಂದು ಭಾವಿಸಲಾಗಿದೆ ಎಂದರು.

ಭವ್ಯ ಸಂವಿಧಾನದ ಆಶಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ವಾಚನವನ್ನು ಕಡ್ಡಾಯಗೊಳಿಸಿದೆ ಎಂದರು.

ಭಾರತದ ಜನ ಈ ದೇಶದ ಪ್ರಜೆಗಳಾಗಿ ತಮ್ಮನ್ನು ತಾವು ಕಂಡುಕೊಂಡ ದಿನ. ಅಧಿಕಾರಸ್ಥರನ್ನು ಪ್ರಶ್ನಿಸುವ ಸ್ವಾತಂತ್ರ್ಯ ದೇಶದ ಸಾಮಾನ್ಯ ಪ್ರಜೆಗಳಿಗೆ ವಿಧಿವತ್ತಾಗಿ ಲಭ್ಯವಾದ ದಿನ. ಇಲ್ಲಿ ಯಾರ ಅಧಿಕಾರವೂ ಅಂತಿಮವಲ್ಲ, ಯಾರೊಬ್ಬರು ಸಂವಿಧಾನ ಹಾಕಿಕೊಟ್ಟ ಗೆರೆ ಮೀರುವ ಹಾಗಿಲ್ಲ ಎಂಬ ವ್ಯವಸ್ಥೆ ಅಂದಿನಿಂದ ಜಾರಿಗೆ ಬಂತು. ಇದೊಂದು ಚಾರಿತ್ರಿಕ ತಿರುವು. ಪ್ರಪಂಚದ ಎಷ್ಟೋ ಸ್ವಾತಂತ್ರ್ಯ ದೇಶಗಳಿಗೆ ಮೇಲ್ಪಂಕ್ತಿ ಹಾಕಿದ ವಿದ್ಯಮಾನವಿದು ಎಂದು ಡಾ. ಮಹದೇವಪ್ಪ ಹೇಳಿದರು.

ಮೈಸೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಎರಡನೇ ಹಂತದ ಬಾಕಿ ಇರುವ ಕಾಮಗಾರಿಯನ್ನು ರೂ.27 ಕೋಟಿ ವೆಚ್ಚದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ , ಡಾ.ಬಾಬುಜಗಜೀವನರಾಂ ಭವನಗಳ ನಿರ್ಮಾಣ, ಪ್ರಗತಿ ಕಾಲೋನಿ, ಸ್ಮಶಾನಗಳ ಅಭಿವೃದ್ದಿ ಹಾಗೂ ವಿವಿಧ ಕಾಮಗಾರಿಗಾಗಿ ರೂ.121.16 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂವಿಧಾನಕ್ಕೆ ಬದ್ಧವಾಗಿ ಬದುಕುವ ಮನೋಭೂಮಿಕೆ ಇಂದಿನ ತುರ್ತು ಅನಿವಾರ್ಯತೆಯಾಗಿದೆ. ಆಗ ಮಾತ್ರವೇ ಸಂವಿಧಾನದ ಅತೀ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ನಿಜವಾದ ಅರ್ಥ ಬರುವುದು ಎಂದು ಅವರು ತಿಳಿಸಿದರು.

ಗಣರಾಜ್ಯೋತ್ಸವದ ಈ ಶುಭ ದಿನ ನಾವೆಲ್ಲರೂ ಇಂತಹ ಒಂದು ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಕಂಕಣಬದ್ಧರಾಗಿ ಶ್ರಮಿಸುವ ಸಂಕಲ್ಪ ಮಾಡಬೇಕಿದೆ. ನಮ್ಮ ಸರ್ಕಾರ ಜನರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಚಿವರು ಹೇಳಿದರು.

ಧ್ವಜಾರೋಹಣ ನೆರವೇರಿಸಿದ ಸಚಿವರು ಧ್ವಜವಂದನೆ ಸ್ವೀಕರಸಿ ಪೆರೇಡ್ ಪರಿವೀಕ್ಷಣೆ ನಡೆಸಿದರು. ಪೊಲೀಸ್ ಇಲಾಖೆ, ಕೆ ಎಸ್ ಆರ್ ಪಿ ತುಕಡಿ, ಗೃಹ ರಕ್ಷಕ ದಳ, ಅಬಕಾರಿ ಇಲಾಖೆ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ನ ಸದಸ್ಯರಾದ ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಐ ಜಿ ಪಿ ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯತ್ರಿ, ನಗರ ಪೊಲೀಸ್ ಆಯುಕ್ತರಾದ  ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.