ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಸಾಥ್ ನೀಡಿದರು.
ನಂತರ ನಡೆದ ರ್ಥವ್ಯ ಪಥದಲ್ಲಿ ನಡೆದ ಪಥಸಂಚಲನ ಹಾಗೂ
ಭವ್ಯ ಮೆರವಣಿಗೆ ಎಲ್ಲರ ಮನ ಸೂರೆಗೊಂಡಿತು.
ಸಮಾರಂಭದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು.
ಸೇನಾ ಪರೇಡ್ ನಲ್ಲಿ ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿಲ್ ಯುದ್ಧ ವೀರರು ಹಾಗೂ ಓರ್ವ ಅಶೋಕ ಚಕ್ರ ಪುರಸ್ಕೃತರು ಭಾಗಿಯಾಗಿರುವುದು ವಿಶೇಷವಾಗಿತ್ತು. ಇದೇ ವೇಳೆ ಎಲ್ಲಾ ರಾಜ್ಯಗಳ ಸ್ತಬ್ಧ ಚಿತ್ರಗಳು ಆಯಾ ರಾಜ್ಯಗಳ ಹೆಮ್ಮೆಯ ಪ್ರತೀಕವನ್ನು ಪ್ರತಿಬಿಂಬಿಸಿದವು.
ಅದರಲ್ಲೂ ಈ ಬಾರಿ ಮಧ್ಯಪ್ರದೇಶದ ಚೀತಾ ಯೋಜನೆ, ಉತ್ತರ ಪ್ರದೇಶದ ಮಹಾ ಕುಂಭಮೇಳ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಲಕ್ಪತಿ ದೀದಿ ಯೋಜನೆ ಬಿಂಬಿಸುವ ಟ್ಯಾಬ್ಲೊಗಳು ಮೆಚ್ಚುಗೆಗೆ ಪಾತ್ರವಾದವು.
ಪರೇಡ್‌ನಲ್ಲಿ 22 ಯುದ್ಧ ವಿಮಾನಗಳು,11 ಸಾರಿಗೆ ವಿಮಾನಗಳು ಹಾಗೂ 7 ಹೆಲಿಕಾಪ್ಟರ್‌ಗಳು ಸೇರಿದಂತೆ ಒಟ್ಟು 40 ವಿಮಾನಗಳು ಹತ್ತು ವಿಭಿನ್ನ ನೆಲೆಗಳಿಂದ ಹಾರಾಟ ನಡೆಸಿದವು. 130ಜೆ ಸೂಪರ್ ಹರ್ಕಯುಲಸ್, ಸಿ-275, ಸಿ-17 ಗ್ರೋಬ್ ಮಾಸ್ಟರ್, ಪಿ-8ಐ, ಮಿಗ್-29 ಮತ್ತು ಸುಖೋಯ್-30, ಇತರ ವಿಮಾನಗಳು ದೇಶದ ಗರಿಮೆಗೆ ಸಾಕ್ಷಿಯಾದವು.
ಇದೇ ಮೊದಲಬಾರಿಗೆ ಕರ್ತವ್ಯ ಪಥದಲ್ಲಿ 5,000 ಜನಪದ ಮತ್ತು ಬುಡಕಟ್ಟು ಕಲಾವಿದರು ಮೂಲ ಮತ್ತು ಅಧಿಕೃತ ವೇಷಭೂಷಣಗಳು, ಆಭರಣಗಳು, ಶಿರಸ್ತ್ರಾಣಗಳು ಮತ್ತು ಈಟಿಗಳು, ಕತ್ತಿಗಳು ಮತ್ತು ಡ್ರಮ್‌ಗಳಂತಹ ಸಾಂಪ್ರದಾಯಿಕ ಪರಿಕರಗಳೊಂದಿಗೆ ನೃತ್ಯ ಪ್ರದರ್ಶನ ಮಾಡಿ ವಿಭಿನ್ನ ಸಂಸ್ಕೃತಿಗಳನ್ನು ಕಲೆಯಲ್ಲಿ ಪ್ರದರ್ಶಿಸಿದರು.
ಬೈಕ್ ಸಿಗ್ನಲ್ ಕಾರ್ಪ್ಸ್ ತಂಡ ಚಲಿಸುವ ಮೋಟಾರ್‌ಬೈಕ್ ತಂಡ ವಿಶಿಷ್ಠ ಸಾಧನೆಗೆ ಸಾಕ್ಷಿಯಾಯಿತು. ಬೈಕ್‌ನಲ್ಲಿ ಅಳವಡಿಸಲಾದ 12 ಅಡಿ ಏಣಿಯ ಮೇಲೆ ರಾಷ್ಟ್ರಪತಿಗಳಿಗೆ ಸೆಲ್ಯೂಟ್ ಸಲ್ಲಿಸಿದ ಮೊದಲ ಮಹಿಳಾ ಭಾರತೀಯ ಸೇನಾಧಿಕಾರಿ ಎಂಬ ವಿಶ್ವ ದಾಖಲೆಯನ್ನೂ ಬರೆಯಿತು.