ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಒಂದು ಭಯಗ್ರಸ್ತ ವಿಷಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಭಾಷಣ
ಮಾಡಿದ ರಾಜ್ಯಪಾಲರು,ರಾಜ್ಯದಲ್ಲಿ ಈಗ ವರದಿಯಾಗುತ್ತಿರುವ ಎಲ್ಲಾ ಅಪರಾಧ ಪ್ರಕರಣಗಳ ಒಟ್ಟು ಶೇಕಡಾವಾರು ಪ್ರಮಾಣದಲ್ಲಿ ಸೈಬರ್ ಅಪರಾಧಗಳು ಶೇ.10ರಷ್ಟಿದೆ ಎಂದು ಹೇಳಿದರು.
ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಶಿಕ್ಷಿಸಲು ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯು ಸಾರ್ವಜನಿಕ ಜಾಗೃತಿ ಮೂಡಿಸುವ ಪ್ರಮುಖ ಹಂತಗಳಾಗಿವೆ ಮತ್ತು ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಹಂತಗಳಲ್ಲಿ ತರಬೇತಿ ಮತ್ತು ಅಗತ್ಯ ತಂತ್ರಜ್ಞಾನವನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಸರ್ಕಾರವು ನಾಡಿನ ಸಮಗ್ರ ಅಭಿವೃದ್ಧಿ ಮತ್ತು ಸಂಪತ್ತಿನ ವಿನಿಯೋಗದಲ್ಲಿ ಸಾಮಾಜಿಕ ನ್ಯಾಯವನ್ನು ಅನುಷ್ಠಾನ ಮಾಡುವಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಆರೋಗ್ಯ, ವಿದ್ಯುತ್, ಶಿಕ್ಷಣ, ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳ ಒದಗಿಸುವಿಕೆಯಲ್ಲಿ ರಾಜ್ಯ ಮುಂದೆ ಇದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪೊಲೀಸರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ಪತ್ತೆ ಮತ್ತು ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎಲ್ಲಾ ರೀತಿಯ ಅಪರಾಧಗಳನ್ನು, ವಿಶೇಷವಾಗಿ ಗಂಭೀರ ಅಪರಾಧಗಳನ್ನು ನಿಯಂತ್ರಿಸುವ ಮೂಲಕ ಅಪರಾಧಗಳ ಸಂಖ್ಯೆಯಲ್ಲಿನ ಇಳಿಕೆಯು ಅತ್ಯಂತ ಗಮನಾರ್ಹ ಸಾಧನೆಯಾಗಿದೆ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಕರ್ತವ್ಯ ನಿರತ ಹಾಗೂ ಕರ್ತವ್ಯದ ಮೇಲಿಲ್ಲದ ಅವಧಿಯ ಅಪಘಾತಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಯಲ್ಲಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಬನ್ ಘಟಕಗಳ ಮಾರಾಟದ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಕಾರ್ಬನ್ ಬೇರ್ಪಡಿಸುವ ತೋಟಗಾರಿಕೆ ಬೆಳೆಗಳನ್ನು ಗುರುತಿಸುವ ಮೂಲಕ ಕಾರ್ಬನ್ ಕ್ರೆಡಿಟ್ ಫ್ರೇಮ್ ವರ್ಕ್ ಎಂಬ ಹೊಸ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ.
ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಬಲಪಡಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ತರಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.
ರಾಜ್ಯದ ಸರ್ವಾಂಗೀಣ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಗ್ಯಾರಂಟಿ ಯೋಜನೆಗಳು ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳಿಗೆ ಸಾಕಷ್ಟು ಹಣವನ್ನು ಹಂಚಿಕೆ ಮಾಡಿದೆ ಗೌರ್ನರ್ ತಿಳಿಸಿದರು.
ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ 12 ಸಾಧನೆಗೈದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್-ಎ, ಗ್ರೂಪ್-ಬಿ ಮತ್ತು ಇತರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆದೇಶ ಪತ್ರಗಳನ್ನು ನೀಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ ಎಲ್ಲಾ ಕಾನೂನುಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು, 1957 ರಿಂದ ಇತ್ತೀಚಿನವರೆಗೆ ಕಾನೂನಿನಲ್ಲಿ ಮಾಡಲಾದ ಎಲ್ಲಾ ತಿದ್ದುಪಡಿಗಳನ್ನು www.dpal.karnataka.gov.in ವೆಬ್ಸೈಟ್ನಲ್ಲಿ ಸೇರಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎಂದು ಸರ್ಕಾರದ ಯೋಜನೆಗಳನ್ನು ರಾಜ್ಯಪಾಲರು ತಿಳಿಸಿದರು.