ಮೈಸೂರು: ಇದೇ ಜ. 31ಕ್ಕೆ ನೋಡಿದವರು ಏನಂತಾರೆ ಸಿನಿಮಾ ರಿಲೀಸ್ ಆಗಲಿದ್ದು,
ಟ್ರೇಲರ್ ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕುಲದೀಪ್ ಕಾರಿಯಪ್ಪ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು,
ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲರಿಂದ ಶುಭ ಹಾರೈಕೆ ಸಿಕ್ಕಿದೆ ಎಂದು ಸಂತಸ ಪಟ್ಟರು.
ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳೇ ವಿಭಿನ್ನ. ಪ್ರತಿ ಸಿನಿಮಾದಲ್ಲಿಯೂ ತಾವು ಎಂತಹ ನಟ ಅನ್ನೋದನ್ನು ಸಾಬೀತುಪಡಿಸಿಕೊಂಡು ಬರುತ್ತಿದ್ದು ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.
ಕುಲದೀಪ್ ಕಾರಿಯಪ್ಪ ಸಾರಥ್ಯದ ನೋಡಿದವರು ಏನಂತಾರೆ ಸಿನಿಮಾದಲ್ಲಿ ನವೀನ್ ಅಕ್ಷರಶಃ ಜೀವಿಸಿದ್ದಾರೆ. ಅದಕ್ಕೆ ಬಿಡುಗಡೆಯಾಗಿರುವ ಟ್ರೇಲರ್ ಸಾಕ್ಷಿಯಾಗಿದೆ.
ಜನವರಿ 31ರಂದು ಬಿಡುಗಡೆಯಾಗಲಿರುವ ನೋಡಿದವರು ಏನಂತಾರೆ ಚಿತ್ರದ ಟ್ರೇಲರ್ ಅನ್ನು ಶಿವರಾಜ್ ಕುಮಾರ್, ಡಾಲಿ ಧನಂಜಯ್, ರುಕ್ಮಿಣಿ ವಸಂತ್ ಸೇರಿದಂತೆ ಕನ್ನಡ ಚಿತ್ರೋದ್ಯಮದ ಹಲವಾರು ನಟ – ನಟಿ – ನಿರ್ದೇಶಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತ ಪಡಿಸಿ ಪ್ರೋತ್ಸಾಹಿಸಿದ್ದಾರೆ ಎಂದು ಕಾರಿಯಪ್ಪ ತಿಳಿಸಿದರು.
ಭಾವನಾತ್ಮಕ ಚೌಕಟ್ಟಿನಲ್ಲಿ ಸಾಗುವ ನೋಡಿದವರು ಏನಂತಾರೆ ಸಿನಿಮಾದಲ್ಲಿ ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.
ವಿಶೇಷವೆಂದರೆ ಸುಮಾರು 40 ವರ್ಷಗಳ ನಂತರ ಗೀತ ಚಿತ್ರದಲ್ಲಿ ಶಂಕರ್‌ನಾಗ್ ಅವರೊಂದಿಗೆ ಕಾಣಿಸಿಕೊಂಡಿದ್ದ ಪದ್ಮಾವತಿ ರಾವ್ ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಮರಳಿ ಬಂದಿರುವುದು.
ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಮಯೂರೆಶ್ ಸಂಗೀತ ಒದಗಿಸಿದ್ದು, ಅಶ್ವಿನ್ ಕ್ಯಾಮೆರಾ ಹಿಡಿದ್ದಾರೆ. ಕುಲದೀಪ್ ಕಾರಿಯಪ್ಪ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಅವರ ಜೊತೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್ ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.
ಖ್ಯಾತ ಲೇಖಕ ಹಾಗು ಸಾಹಿತಿ ಜಯಂತ್ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಪ್ರೀತಿ, ಸ್ನೇಹ, ತ್ಯಾಗ, ಸೆಂಟಿಮೆಂಟ್, ಎಮೋಷನ್ ಒಳಗೊಂಡಿರುವ ನೋಡಿದವರು ಏನಂತಾರೆ ಸಿನಿಮಾ ಇದೇ ತಿಂಗಳ 31ರಂದು ಬಿಡುಗಡೆಯಾಗಲಿದ್ದು ಎಲ್ಲರೂ ಸಿನಿಮಾ ಥಿಯೆಟರ್ ಗಳಿಗೆ ಬಂದು ಚಿತ್ರವೀಕ್ಷಿಸಬೇಕೆಂದು ಕಾರಿಯಪ್ಪ ಈ ವೇಳೆ ಸಿನಿಪ್ರಿಯರಲ್ಲಿ ಮನವಿ ಮಾಡಿದರು.