(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ (ಗುಂಡ್ಲುಪೇಟೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೈಸೂರು-ಊಟಿ ಹೆದ್ದಾರಿಯಲ್ಲಿ ಆನೆ ಕಂಡ ಯುವಕ ಕಾರಿಂದಿಳಿದು ಆನೆ ಸಮೀಪ ಫೋಟೋ ತೆಗೆದುಕೊಳ್ಳಲು ಹೋಗಿ ಸಿಕ್ಕಿ ಬಿದ್ದು ದಂಡ ಕಟ್ಟಿದ ಪ್ರಸಂಗ ನಡೆದಿದೆ.
ಬಂಡೀಪುರ ಹೆದ್ದಾರಿಯಲ್ಲಿ ನಿಂತ ಆನೆ ಮುಂದೆ ಪಟ್ಟಣದ ಯುವಕ ಸಾಹುಲ್ ಆನೆ ಜೊತೆ ಫೋಟೋಗಾಗಿ ಹುಚ್ಚಾಟ ಮೆರೆದು ಅರಣ್ಯ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟು ದಂಡ ಕಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಶನಿವಾರ ಬಂಡೀಪುರ ಹೆದ್ದಾರಿಯಲ್ಲಿ ಸ್ನೇಹಿತರೊಂದಿಗೆ ಕಾರಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಕಾಡಾನೆ ಕಂಡು ಗುಂಡ್ಲುಪೇಟೆ ನಿವಾಸಿ ಸಾಹುಲ್ ರಸ್ತೆಗಿಳಿದು ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಕಾರಲ್ಲಿದ್ದ ಸ್ನೇಹಿತ ಆನೆ ಜೊತೆ ಕೀಟಲೆ ಮಾಡುವ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆತನನ್ನು ಕರೆಯಿಸಿ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ 25 ಸಾವಿರ ದಂಡ ಪೀಕಿಸಿದ್ದಾರೆ.
ಪ್ರವಾಸಿಗರು ಇತ್ತೀಚೆ ಅರಣ್ಯ ಹಾಗೂ ಕಾಡುಪ್ರಾಣಿಗಳೊಂದಿಗೆ ಪೊಟೊ ವಿಡಿಯೊ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದ್ದು ಅರಣ್ಯ ಇಲಾಖೆಯವರ ಗಸ್ತು ನಿರ್ಲಕ್ಷ್ಯವೆ ಇದಕ್ಕೆ ಕಾರಣವಾಗಿದೆ.
ಇದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾದ ಮೇಲೆ ಇಲಾಖೆ ಎಚ್ಚೆತ್ತುಕೊಂಡಿರು ವುದು ವಿಪರ್ಯಾಸ.