ಸಕಲೇಶಪುರ: ಕಾಂಗ್ರೆಸ್ ನಾಯಕರು ಮುಸ್ಲಿಮರ ಮತಗಳ ಋಣದಲ್ಲಿ ಇರುವುದರಿಂದ ಗಲಭೆಕೋರರ ಪರ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಆದಿಚುಂಚನಗಿರಿ ಮಠದ ಪೂಜ್ಯ ಶ್ರೀ ಡಾ. ನಿರ್ಮಲಾ ನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸಕಲೇಶಪುರ ಪಟ್ಟಣದಲ್ಲಿ ನಡೆದ, ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅಶೋಕ್ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೈಸೂರಿನಲ್ಲಿ ನಡೆದ ಗಲಭೆ ವಿಚಾರದಲ್ಲಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡಿದರೆ, ಸಿಎಂ ಸಿದ್ದರಾಮಯ್ಯ ಮತ್ತೊಂದು ದಾರಿ ಹಿಡಿದಿದ್ದಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ, ಪೊಲೀಸರನ್ನು ಗಾಯಗೊಳಿಸುವುದು ಹೊಸತಲ್ಲ. ಮೈಸೂರಿನ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸದೇ ಇದ್ದಲ್ಲಿ ಇಡೀ ಪೊಲೀಸ್ ಠಾಣೆ ಧ್ವಂಸವಾಗುತ್ತಿತ್ತು ಎಂದು ಹೇಳಿದರು.
ಪೊಲೀಸರು ಬಹಳ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ. ಮುಸ್ಲಿಮರ ಮತಗಳ ಭಿಕ್ಷೆಯ ಋಣದಲ್ಲಿ ಕಾಂಗ್ರೆಸ್ ಇರುವುದರಿಂದ, ಸಚಿವರು, ಮುಖ್ಯಮಂತ್ರಿ ಈ ರೀತಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬೆಂಕಿ ಹಚ್ಚಲು ಏನೇನು ಹೇಳಬೇಕೋ ಅದನ್ನು ಹೇಳಿದ್ದಾರೆ. ಸಚಿವರು ಪೊಲೀಸರಿಗೆ ನಿಂದಿಸಿದ್ದಾರೆ ಎಂದು ಕಿಡಿಕಾರಿದರು.
ನಾಡಪ್ರಭು ಕೆಂಪೇಗೌಡರು ಸಾಮಂತ ರಾಜರಾಗಿ ದ್ದರು. ರಾಜಧಾನಿ ಬೆಂಗಳೂರನ್ನು ನಿರ್ಮಿಸುವಾಗ ಎಲ್ಲ ಸಮುದಾಯಗಳಿಗಾಗಿ ಪ್ರತ್ಯೇಕವಾದ ಪೇಟೆಗಳನ್ನು ನಿರ್ಮಾಣ ಮಾಡಿದ್ದರು. ರಾಜಧಾನಿ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಸ್ಮರಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಿಜೆಪಿ ಸರ್ಕಾರದಿಂದ ಕಂಚಿನ ಪ್ರತಿಮೆ ನಿರ್ಮಿಸಲಾಗಿತ್ತು. ವಿಧಾನಸೌಧದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಇರಲಿಲ್ಲ. ನಾನು ಕಂದಾಯ ಸಚಿವನಾಗಿದ್ದಾಗ ಪ್ರತಿಮೆ ನಿರ್ಮಿಸಲಾಗಿತ್ತು. ಈಗ ಸಕಲೇಶಪುರದಲ್ಲಿ ಪ್ರತಿಮೆ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಅಶೋಕ್ ತಿಳಿಸಿದರು.