ಕೋವಿಡ್ ಸ್ಪಂದನೆಗಾಗಿ ಆರ್ಥಿಕ ಸ್ಪಂದನ ಕಾರ್ಯಕ್ರಮ -ಸಚಿವ ಎಸ್ ಟಿ ಎಸ್

ಮೈಸೂರು, ಅ. 2- ಕೋವಿಡ್-19ರ ಅಂಗವಾಗಿ ಮೈಸೂರು ವಿಭಾಗದಲ್ಲಿ ಆರ್ಥಿಕ ಸ್ಪಂದನಕ್ಕೆ ಶುಕ್ರವಾರ ಸಹಕಾರ ಇಲಾಖೆ ಮೂಲಕ ಚಾಲನೆ ನೀಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಶುಕ್ರವಾರ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು.
ಇದರ ವ್ಯಾಪ್ತಿಗೆ 8 ಜಿಲ್ಲೆಗಳು ಬರಲಿದ್ದು, ರೈತರು, ಸಣ್ಣ ರೈತರು, ಉದ್ದಿಮೆದಾರರು, ವ್ಯಾಪಾರಸ್ಥರು ಹೀಗೆ ಹಲವು ವಿಭಾಗಗಳಲ್ಲಿ ಸಾಲ ನೀಡಲಾಗುತ್ತದೆ. ಇದಕ್ಕಾಗಿ 8600 ಕೋಟಿ ರೂ.ವನ್ನು ನಿಗದಿಪಡಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಬೆಂಗಳೂರಿನಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಒಟ್ಟು ನಾಲ್ಕು ವಿಭಾಗಗಳ ಮೂಲಕ 39 ಸಾವಿರ ಕೋಟಿ ರೂಪಾಯಿ ಸಾಲವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಮೈಸೂರನ್ನು ಮಹಾನಗರ ಪಾಲಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ಹೀಗಾಗಿ ಇಲ್ಲಿನ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. 8 ಗ್ರಾಮ ಪಂಚಾಯಿತಿ ಗಳಿಗೆ ಅರ್ಹತೆ ಇದೆ. ಜನಸಂಖ್ಯೆ ಆಧಾರದ ಮೇಲೆ ಮಹಾನಗರ ಪಾಲಿಕೆಯಾಗಿ ಪರಿವರ್ತಿಸಬೇಕೇ ಎಂಬ ಬಗ್ಗೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಗಾಂಧಿ ಜಯಂತಿ: ಪ್ರಾರ್ಥನೆ ಸಭೆ: ನಗರದ ಪುರಭವನದಲ್ಲಿ ಗಾಂಧಿ ಜಯಂತಿ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡ ಸಹಕಾರ ಹಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಮೊದಲಿಗೆ ಗಾಂಧೀಜಿ ಅವರ ಗೀತೆಗಳನ್ನು ರವಿಶಂಕರ್ ಹಾಗೂ ಅವರ ತಂಡದವರಿಂದ ಹಾಡಿದರು. ಬಳಿಕ ಹಿಂದೂ, ಕ್ರೈಸ್ತ, ಮುಸಲ್ಮಾನ ಹಾಗೂ ಜೈನಧರ್ಮಗಳ ಸ್ವಾಮೀಜಿಗಳು ಹಾಗೂ ಧರ್ಮಗುರುಗಳು ಆಯಾ ಧರ್ಮಗಳ ಪ್ರಾರ್ಥನಾ ಸಂದೇಶವನ್ನು ಪಠಿಸಿದರು.
ಈ ಮೂಲಕ ಸಾರ್ವಜನಿಕರಿಗೆ ಜೀವನವನ್ನು ಎದುರಿಸುವ ಬಗ್ಗೆ ಸಂದೇಶವನ್ನು ನೀಡಲಾಯಿತು.
ಗಾಂಧೀಜಿ ಅವರ ಆತ್ಮಚರಿತ್ರೆಯ ಕೆಲವು ಆಯ್ದ ಭಾಗಗಳನ್ನು ಈ ಸಂದರ್ಭದಲ್ಲಿ ಓದಲಾಯಿತು.