ಪಂಚಾ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿ-ದರ್ಶನ್ ಧ್ರುವನಾರಾಯಣ್

ಮೈಸೂರು: ಏಪ್ರಿಲ್ 09 ರಂದು ಶ್ರೀಕಂಠೇಶ್ವರ ಪಂಚಾ ಮಹಾರಥೋತ್ಸವ ಹಾಗೂ ಏಪ್ರಿಲ್ 11 ರಂದು ತೆಪ್ಪೋತ್ಸವ ನಡೆಯಲಿದ್ದು ಈಗಿನಿಂದಲೇ ಎಲ್ಲಾ ಸಿದ್ದತೆ ಮಾಡುವಂತೆ ಶಾಸಕರಾದ ದರ್ಶನ್ ಧ್ರುವನಾರಾಯಣ್ ಸೂಚನೆ ನೀಡಿದರು.

ಇಂದು ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾ ರಥೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಏಪ್ರಿಲ್ 9 ರಂದು ನಡೆಯುವ ಪಂಚಾ ಮಹಾರಥೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಿ ಸಿ ಟಿ ವಿ ಕ್ಯಾಮರಾ ಗಳನ್ನು ಅಳವಡಿಸಬೇಕು. ತಾತ್ಕಾಲಿಕ ವಾಚ್ ಟವರ್ ಗಳನ್ನು ನಿರ್ಮಾಣ ಮಾಡಬೇಕು. ಸುಗಮ ವಾಹನ ಸಂಚಾರಕ್ಕೆ ಬ್ಯಾರಿಕೆಡಿಂಗ್ ವ್ಯವಸ್ಥೆ ಹಾಗೂ ಮಾಹಿತಿ ಫಲಕಗಳು ಹಾಗೂ ಸ್ವಾಗತ ಕಮಾನು ಅಳವಡಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಥೋತ್ಸವ ದಿನಾಂಕದಂದು ರಥಗಳು ಚಲಿಸುವ ರಸ್ತೆಯಲ್ಲಿ ಅಡ್ಡಲಾಗಿ ಇರುವ ವಿದ್ಯುತ್ ತಂತಿ ಗಳನ್ನು ತೆಗೆದು, ರಥೋತ್ಸವ ಮುಗಿದ ನಂತರ ಪುನರ್ ಜೋಡಣೆ ಮಾಡಬೇಕು. ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುವ ದಿನಗಳಂದು ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ರಥೋತ್ಸವದ ಪೂರ್ವಭಾವಿಯಾಗಿ 5 ರಥಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ ದುರಸ್ಥಿ ಅಗತ್ಯವಿದ್ದಲ್ಲಿ ವರದಿ ನೀಡಬೇಕು, ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ತೆಪ್ಪೋತ್ಸವ ದಿನದಂದು ಕಪಿಲಾ ನದಿ ತೀರದಲ್ಲಿ ಭಕ್ತಾದಿಗಳ ಸುರಕ್ಷತಾ ದೃಷ್ಟಿಯಿಂದ ಮುಳುಗು ತಜ್ಞರೊಂದಿಗೆ ಬೋಟ್ ಗಳ ವ್ಯವಸ್ಥೆ ಮಾಡಿಕೊಳ್ಳ ಬೇಕು ಎಂದು ದರ್ಶನ್ ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಅವರು ಮಾತನಾಡಿ ಉತ್ತಮವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ವಾಹನಗಳ ನಿಲುಗಡೆಗೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದರು.

ರಥೋತ್ಸವ ದಿನದಂದು ಸಂಘ ಸಂಸ್ಥೆಗಳು ಉಚಿತವಾಗಿ ನೀಡುವ ಪ್ರಸಾದ ವಿತರಣೆಗೆ ಅನುಮತಿ ಪಡೆಯಬೇಕು. ಪ್ರಸಾದ ವಿತರಣೆಗೆ ಯೋಗ್ಯವಾಗಿ ದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ನಗರ ಸಭಾ ಅಧ್ಯಕ್ಷರಾದ ಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಕಾಸನೂರು, ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು,ಹಲವು ಗ್ರಾಮಗಳ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.