ಕೊಳ್ಳೇಗಾಲ: ಅತಿ ವೇಗವಾಗಿ ಬಂದ ಟಿಪ್ಪರ್ ಕಾರ್ ಗೆ ಅಪ್ಪಳಿಸಿದ ಪರಿಣಾಮ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಐದು ಮಂದಿ ಮೃತಪಟ್ಟ ಘಟನೆ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೂವರು ಯುವಕರು ಇಬ್ಬರು ಯುವತಿಯರು ಒಟ್ಟು ಐವರು ಸ್ಥಳದಲ್ಲೆ ಸಾವನ್ನಪ್ಪಿದ್ದು,ಈ ಘಟನೆ ಚಿಕ್ಕಿoದುವಾಡಿ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ
ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಹಲ್ಲೆಗೆರೆ ಗ್ರಾಮದ ಶ್ರೇಯಸ್, ಇದೇ ತಾಲೂಕಿನ ಲಕ್ಷ್ಮಿಗೌಡನದೊಡ್ಡಿಯ ನಿತಿನ್, ಮಂಡ್ಯದ ಶ್ರೀರಾಮನಗರ ನಿವಾಸಿ ಸುಹಾಸ್, ಮೈಸೂರಿನ ಆಲನಹಳ್ಳಿ ವಾಸಿ ಶ್ರೀ ಲಕ್ಷ್ಮಿ ಹಾಗೂ ಪಿರಿಯಾಪಟ್ಟಣ ತಾಲೂಕು ಶಾನುಭೋಗನ ಹಳ್ಳಿಯ ಲಿಖಿತ ಮೃತಪಟ್ಟ ದುರ್ದೈವಿಗಳು.
ಈ ನತದೃಷ್ಟರು ಸುಮಾರು 22 ರಿಂದ 23 ವಯಸ್ಸಿನ ಆಸುಪಾಸಿನವರು.
ಇಂದು ಬೆಳಿಗ್ಗೆ 9.30 ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರೆಲ್ಲರೂ ಸ್ನೇಹಿತರು. ಸ್ವಿಫ್ಟ್ ಕಾರಿನಲ್ಲಿ ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿದ್ದ ಮಹಾ ರಥೋತ್ಸವಕ್ಕೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ.
ಹನೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಚಾಲಕ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಸ್ವಿಫ್ಟ್ ಕಾರ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದಿದೆ. ಘಟನೆಯಿಂದ ಕಾರಿನಲ್ಲಿದ್ದ ಐವರು ಕಾರಿನೊಳಗೆ ಉಸಿರು ಚೆಲ್ಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.
ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮುಂದಿನ ಕ್ರಮದ ಬಗ್ಗೆ ಸೂಚಿಸಿದ್ದಾರೆ
ಆದರೆ ಕಾರಿನಲ್ಲಿದ್ದ ಇವರು ಒಟ್ಟಿಗೆ ಮೃತಪಟ್ಟಿರುವು ದರಿಂದ ಮೃತರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸ್ವಿಫ್ಟ್ ಕಾರಿನ ಸಂಖ್ಯೆ ಕೆ.ಎ11 ಆಗಿರುವುದರಿಂದ ಮಂಡ್ಯ ಜಿಲ್ಲೆಯವರಿರ ಬೇಕೆಂದು ಶಂಕಿಸಲಾಗಿದೆ.
ಕೊಳ್ಳೇಗಾಲ ಮಲೆ ಮಾದೇಶ್ವರ ಬೆಟ್ಟ ರಸ್ತೆಯನ್ನು ಕೆ ಸಿಫ್ ಯೋಜನೆಯಡಿ ಅಭಿವೃದ್ಧಿಪಡಿಸಿರುವುದರಿಂದ ವಾಹನ ಸವಾರರು ತಮ್ಮ ವಾಹನಗಳನ್ನು ಅತಿ ವೇಗವಾಗಿ ಚಲಾಯಿಸುವುದರಿಂದ ಆಗಿಂದಾಗ್ಗೆ ಈ ರಸ್ತೆಯಲ್ಲಿ ಭೀಕರ ಅಪಘಾತಗಳು ಸಂಭವಿಸುತ್ತಿರುವೆ.
ರಸ್ತೆ ಅಭಿವೃದ್ಧಿಪಡಿಸಿರುವ ಕೇಸಿಫ್ ಯೋಜನೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ ವೇಳೆ ಈ ರಸ್ತೆಯನ್ನು ಅಲ್ಲಲ್ಲಿ ಸುಮಾರು 6 ರಿಂದ 8 ಅಡಿ ಎತ್ತರಕ್ಕೆ ಎತ್ತರಿಸಿದ್ದಾರೆ.
ಆದರೆ ರಸ್ತೆಗಳ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿಲ್ಲ .ಇದರಿಂದಾಗಿ ಅತಿ ವೇಗವಾಗಿ ಚಲಿಸುವ ಬಹುತೇಕ ವಾಹನಗಳು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು ಸಾವು,ನೋವು ಹೆಚ್ಚಾಗುತ್ತಿದೆ.