ಬೆಂಗಳೂರು: ಬೆಂಗಳೂರು 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಮೇರು ನಟಿ, ಬಹುಭಾಷಾ ಕಲಾವಿದೆ ಶಬಾನಾ ಆಜ್ಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.
ಇಂದು ಕಾವೇರಿ ನಿವಾಸದಲ್ಲಿ ಶಬಾನಾ ಆಜ್ಮಿ ಮತ್ತು ವಿಶ್ವ ವಿಖ್ಯಾತ ಕವಿ, ಗೀತಕಾರ ಜಾವೇದ್ ಅಖ್ತರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಶಬಾನಾ ಆಜ್ಮಿ ಅವರಿಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ,ಹಾರ ಹಾಕಿ ಬೊಕೆ ಕೊಟ್ಟು,ಜೀವಮಾನ ಸಾಧನೆ ಪ್ರಶಸ್ತಿ ಮತ್ತು 10 ಲಕ್ಷದ ಚೆಕ್ ನೀಡಿ ನೀಡಿ ಸಿಎಂ ಗೌರವಿಸಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು,ಮಿಲೇಸುರ್ ಮೇರಾ ತುಮಾರಾ ದೃಶ್ಯಕಾವ್ಯ ನಮಗೆ ತುಂಬಾ ಇಷ್ಟ. ಇದರಲ್ಲಿ ನಿಮ್ಮನ್ನು ನೋಡಿದ್ದೇನೆ ಎಂದು ಶಬಾನಾಆಜ್ಮಿಯವರನ್ನುದ್ದೇ ಶಿಸಿ ಹೇಳಿದರು.
ಕರ್ನಾಟಕ ರಾಜ್ಯ ಸಾಂಸ್ಕೃತಿಕವಾಗಿ ಮತ್ತು ಸಂಗೀತಕ್ಕೆ ಅತ್ಯಂತ ಪ್ರಸಿದ್ಧಿ ಎಂದು ಶಬಾನಾ ಮತ್ತು ಜಾವೇದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಭೀಮ ಸೇನ್ ಜೋಶಿ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್ ಇವರೆಲ್ಲಾ ಹಿಂದೂಸ್ತಾನಿ ಸಂಗೀತದ ದಿಗ್ಗಜರು, ನಮ್ಮ ರಾಜ್ಯದ ಹೆಮ್ಮೆ, ಇವರೆಲ್ಲಾ ಧಾರವಾಡದವರು ಎನ್ನುವುದು ಮತ್ತೊಂದು ವಿಶೇಷ ಎಂದು ಹೇಳಿದರು.
ಕಾಪಿ ರೈಟ್ಸ್ ಕಾಯ್ದೆಯಲ್ಲಿ ಕಲಾವಿದರಿಗೆ, ಸಂಗೀತ ಗಾರರಿಗೆ ಅನುಕೂಲ ಆಗಿರುವ ರೀತಿಯಲ್ಲೇ, ಜಿಎಸ್ ಟಿ ಯಲ್ಲೂ ಅನುಕೂಲ ಆಗುವ ರೀತಿಯಲ್ಲಿ ಜಿಎಸ್ ಟಿ ಕೌನ್ಸಿಲ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಬಗ್ಗೆಯೂ ಸಿಎಂ ಭರವಸೆ ನೀಡಿದರು.
ಸರ್ಕಾರದ ಕಾರ್ಯದರ್ಶಿ ಕಾವೇರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ , ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಶಬಾನಾ ಆಜ್ಮಿ ಮತ್ತು ಜಾವೇದ್ ಅಖ್ತರ್ ಅವರನ್ನು ಸ್ವಾಗತಿಸಿದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ , ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾದು ಕೋಕಿಲ, 16 ನೇ ಅಂತಾರಾಷ್ಟ್ರೀಯ ಚಲನ ಚಿತ್ರೋ ತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಉಪಸ್ಥಿತರಿದ್ದು ಗೌರವಿಸಿದರು.