ಪಾಲಿಕೆ ನಡೆ ಜನತೆ ಕಡೆ ಕಾರ್ಯಕ್ರಮಕ್ಕೆ ಜಿಟಿಡಿ ಚಾಲನೆ

ಮೈಸೂರು, ಅ 3- ‘ಪಾಲಿಕೆ ನಡೆ ಜನತೆ ಕಡೆ’ ಕಾರ್ಯಕ್ರಮಕ್ಕೆ ಶಾಸಕ ಜಿ. ಟಿ. ದೇವೇಗೌಡ ಅವರು ಶನಿವಾರ ಚಾಲನೆ ನೀಡಿದರು.
ಮೈಸೂರು ಮಹಾ ನಗರ ಪಾಲಿಕೆ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ವಿನೂತನ ಕಾಯಕ್ರಮ ‘ಪಾಲಿಕೆ ನಡೆ ಜನತೆ ಕಡೆ’ ಕಾರ್ಯಕ್ರಮಕ್ಕೆ ಶಾಸಕ ಜಿಟಿಡಿ ಚಾಲನೆ ನೀಡಿ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಮತ್ತು ಅನುಭೋಗದಾರರು ಆಸ್ತಿ ತೆರಿಗೆ ಪಾವತಿಸಲು ಕೋವಿಡ್-19 ಪ್ರಯುಕ್ತ ನಗರ ಪಾಲಿಕೆಯ ಕಚೇರಿಗೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಪಾಲಿಕೆ ನಡೆ ಜನತೆ ಕಡೆ ಎಂಬ ವಿನೂತನ ಆಸ್ತಿ ತೆರಿಗೆ ವಸೂಲಾತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಅವಕಾಶವನ್ನು ಆಸ್ತಿ ಮಾಲೀಕರು, ಅನುಭೋಗದಾರರು ಸದುಪಯೋಗಪಡಿಸಿಕೊಂಡು ಆಸ್ತಿ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಹಾಗೂ ಸ್ವಚ್ಛ ಭಾರತ್ ಯೋಜನೆಯಡಿ ಪ್ರಶಂಸಾರ್ಹ ದಿಸೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕರಿಸುವಂತೆ ಜಿಟಿಡಿ ಮೈಸೂರಿಗರಲ್ಲಿ ಮನವಿ ಮಾಡಿದರು.
ವಲಯ ಕಚೇರಿ-3ರ ವಾರ್ಡ್ ನಂಬರ್ 46 ಮತ್ತು 58 ರ ವ್ಯಾಪ್ತಿಯಲ್ಲಿ, ಸಾಲುಮರದ ತಿಮ್ಮಕ್ಕ ಉದ್ಯಾನವನ ರಾಮಕೃಷ್ಣನಗರ ಎಚ್ ಬ್ಲಾಕ್, ಅ. 5ರಂದು ವಾರ್ಡ್ ನಂ.46 ಗಣಪತಿ ದೇವಸ್ಥಾನ ಐ ಬ್ಲಾಕ್ ರಾಮಕೃಷ್ಣನಗರ ಹಾಗೂ ಅ. 12ರಂದು ವರಮಹಾಲಕ್ಷ್ಮಿ ದೇವಸ್ಥಾನ ಆವರಣ, ಮೂರನೇ ಹಂತ ದಟ್ಟಗಳ್ಳಿಯಲ್ಲಿ ನಿಗದಿತ ಸ್ಥಳದಲ್ಲಿ ಆನ್ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆಚ್ಚವರಿ ಆಯುಕ್ತ ಶಶಿಕುಮಾರ್, ವಲಯ ಆಯುಕ್ತ ಸತ್ಯಮೂರ್ತಿ, ಪಾಲಿಕೆ ಸದಸ್ಯರುಗಳಾದ ನಿರ್ಮಲ, ಶರತ್, ಶಿವಕುಮಾರ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.