ಹಾವೇರಿ: ರಾಣೇಬೆನ್ನೂರಿನ ಆಸ್ಪತ್ರೆಯೊಂದರ ನರ್ಸ್ ಹತ್ಯೆಯಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ.
ಮೂರು ಮಂದಿ ವಿರುದ್ಧ ಶಂಕೆ ವ್ಯಕ್ತವಾಗಿದ್ದು,ನಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದ ಯುವತಿಯನ್ನು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ಗುರುತಿಸಲಾಗಿದೆ.
ಮಾ.6 ರಂದು ಯುವತಿಯ ಮೃತದೇಹ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು.
ಮೊದಲು ಅಪರಿಚಿತ ಯುವತಿಯ ಶವ ಎಂದು ಹಲಗೇರಿ ಪೊಲೀಸರು ಪ್ರಕಟಿಸಿದ್ದರು. ಬಳಿಕ ವಾರಸುದಾರರು ಯಾರೂ ಇಲ್ಲದ ಹಿನ್ನೆಲೆ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಶವವನ್ನು ಹೂತು ಹಾಕಲಾಗಿತ್ತು.
ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢಪಟ್ಟಿದೆ. ಬಳಿಕ ತನಿಖೆ ತೀವ್ರಗೊಳಿಸಿದ ಹಲಗೇರಿ ಪೊಲೀಸರು, ಮಾ.3 ರಂದು ಕಾಣೆಯಾಗಿದ್ದ ಯುವತಿಯ ಗುರುತನ್ನು ಪತ್ತೆಹಚ್ಚಿದ್ದರು.
ಇತ್ತ ಸ್ವಾತಿ ಪೋಷಕರು, ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಸ್ವಾತಿ ತಂದೆ ಮೃತಪಟ್ಟಿದ್ದು, ತಾಯಿ ಜೊತೆ ವಾಸವಿದ್ದರು.ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಜಸ್ಟೀಸ್ ಫಾರ್ ಸ್ವಾತಿ ಅಭಿಯಾನ ಆರಂಭಿಸಿದ್ದು, ಹಂತಕರನ್ನು ಪತ್ತೆ ಹಚ್ಚಿ, ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.