ಜನರಿಗೆ ವಿದ್ಯುತ್ ಶಾಕ್ ನೀಡಿದ ಸರ್ಕಾರ

ಬೆಂಗಳೂರು: ಹಾಲಿನ ದರ,ಬಸ್ ಟಿಕೆಟ್‌ ದರ
ಹೀಗೆ ಎಲ್ಲಾ‌ ಬೆಲೆ ಏರಿಕೆ ಮಧ್ಯೆ ಈಗ ವಿದ್ಯುತ್ ಶಾಕ್ ನೀಡಲು‌ ಸರ್ಕಾರ ಮುಂದಾಗಿದೆ.

ಎಸ್ಕಾಂಗಳ ಪಿಂಚಣಿ ಹಣ ಹೊಂದಿಸಲು ಜನರ ಮೇಲೆ ಸರ್ಕಾರ ಬರೆ ಹಾಕುತ್ತಿದೆ.

ಸಿಬ್ಬಂದಿಯ ಪಿಂಚಣಿ ದುಡ್ಡಿಗಾಗಿ ಪ್ರತಿ ಯೂನಿಟ್‌ಗೆ 36 ಪೈಸೆಯಂತೆ ದರವನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಏರಿಕೆ ಮಾಡಿದೆ.

ಕೆಪಿಟಿಸಿಎಲ್ ಪ್ರಸ್ತಾವನೆಗೆ ಕೆಇಆರ್‌ಸಿ ಅಸ್ತು ಎಂದಿದ್ದು ಇದೇ ಏಪ್ರಿಲ್‌ನಿಂದ ದರ ಏರಿಕೆ ಜಾರಿಯಾಗಲಿದೆ.

ಇಂಧನ ಪೂರೈಕೆ ಕಂಪನಿಗಳಿಗೆ (ಎಸ್ಕಾಂಗಳು) ಬುಧವಾರವೇ ಕೆಇಆರ್‌ಸಿ ಗ್ರಾಹಕರಿಂದ ಸರ್ಕಾರದ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳ ಪಾಲನ್ನು ವಸೂಲಿ ಮಾಡಲು ಅವಕಾಶ ನೀಡಿ ಆದೇಶ ಪ್ರಕಟಿಸಿದೆ.

ಈ ವರ್ಷಕ್ಕೆ ಮಾತ್ರವಲ್ಲದೆ 2026-27 ಮತ್ತು 2027-28ರ ಆರ್ಥಿಕ ವರ್ಷಕ್ಕೂ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಮುಂದಿನ ವರ್ಷಗಳಿಗೆ ಗ್ರಾಹಕರು ಕ್ರಮವಾಗಿ 35 ಪೈಸೆ ಮತ್ತು 34 ಪೈಸೆ ಪಾವತಿಸಬೇಕಾಗುತ್ತದೆ. ನೀರಾವರಿ ಪಂಪ್‌ಸೆಟ್, ವಿದ್ಯುತ್ ಬಳಕೆದಾರರು ಸೇರಿದಂತೆ ಎಲ್ಲಾ ಗ್ರಾಹಕರಿಂದಲೂ ವಸೂಲಿಗೆ ನಿರ್ಧಾರ ಮಾಡಲಾಗಿದೆ.

ಪಿಂಚಣಿ ಗ್ರಾಚ್ಯುಟಿ ನೆಪದಲ್ಲಿ 36 ಪೈಸೆ ಹೆಚ್ಚಳ ಮಾಡಿದ್ದರಿಂದ ಒಂದು ಮನೆಗೆ ಅಂದಾಜು 90 ರೂ. ವಿದ್ಯುತ್ ಬಿಲ್ ಹೆಚ್ಚಳವಾಗುವುದು ಗ್ಯಾರಂಟಿ.