ಬೆಟ್ಟಿಂಗ್‌ ಅಪ್ಲಿಕೇಶನ್‌ ಪ್ರಚಾರ: ತೆಲುಗು ನಟ, ನಟಿಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌: ಬೆಟ್ಟಿಂಗ್‌ ಅಪ್ಲಿಕೇಶನ್‌ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ತೆಲುಗು ಖ್ಯಾತ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಸೇರಿದಂತೆ 25 ಕ್ಕೂ ಹೆಚ್ಚು ನಟ ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಹೋರಾಟಗಾರ ಫಣೀಂದ್ರ ಶರ್ಮಾ ಎಂಬುವರು ನೀಡಿದ ದೂರಿನ ಮೇರೆಗೆ ಹೈದರಾಬಾದ್‌ನ ಮಿಯಾಪುರ್ ಪೊಲೀಸರು ಟಾಲಿವುಡ್ ನಟರು ಮತ್ತು ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯನ್ಸರುಗಳ ಮೇಲೆ ಕೇಸು ದಾಖಲಿಸಿದ್ದಾರೆ.

ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ , ಅನನ್ಯಾ, ಶ್ರೀಮುಖಿ, ಸಿರಿ ಹನುಮಂತು, ಶ್ಯಾಮಲಾ, ವರ್ಷಿಣಿ, ಶೋಭಾ, ನೇಹಾ, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಸನ್ನಿ ಯಾದವ್, ಟೇಸ್ಟಿ ತೇಜಾ ಮತ್ತು ರಿತು ಸೇರಿದಂತೆ ಹಲವರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಈ ಪ್ರಸಿದ್ಧ ನಟರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಉದ್ದೇಶಪೂರ್ವಕವಾಗಿ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇವರ ಪ್ರಚಾರ ಮಡುವ ಮೂಲಕ ಯುವ ಜನರ ಮನಸ್ಸು ಹಾಳಾಗುತ್ತಿದೆ. ಇದರಿಂದ ಅನೇಕ ಮನೆಗಳಲ್ಲಿ ಆರ್ಥಿಕ ತೊಂದರೆಗೆ ಕಾರಣವಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಟ್ಟಿಂಗ್ ಆಪ್ ಗಳಲ್ಲಿ ಹಣ ಹಾಕಿ ಯುವ ಜನತೆ ನಷ್ಟಕ್ಕೆ ತುತ್ತಾಗಿದ್ದಾರೆ. ಈ ಆಪ್‌ನಲ್ಲಿ ಹಣ ಕಳೆದುಕೊಂಡು ಹಲವು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಟ್ಟಿಂಗ್ ಆಪ್ ಪ್ರಚಾರಕ್ಕೆ ತೆಲಂಗಾಣ ಸರ್ಕಾರ ಈಗಾಗಲೇ ನಿಷೇಧ ಹೇರಿದೆ,ಆದರೂ ಬೆಟ್ಟಿಂ ಗ್ ಆಪ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ.