ಸಚಿವರ ಹನಿಟ್ರ್ಯಾಪ್‌ ನ್ಯಾಯಾಂಗ ತನಿಖೆ – ಸಿಬಿಐಗೆ ವಹಿಸಿ: ಆರ್‌.ಅಶೋಕ ಒತ್ತಾಯ

ಬೆಂಗಳೂರು: ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಹನಿಟ್ರ್ಯಾಪ್‌ ಮಾಡಿದ ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎನ್‌.ರಾಜಣ್ಣ ಅವರು ವಿಧಾನಸಭೆಯಲ್ಲಿ ಎಲ್ಲರ ಮುಂದೆ ಹನಿಟ್ರ್ಯಾಪ್‌ ಬಗ್ಗೆ ಹೇಳಿದ್ದಾರೆ. ಇದರಲ್ಲಿ ನ್ಯಾಯಾಧೀಶರು, ಕೇಂದ್ರದ ನಾಯಕರ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೀಗೆ ಹೇಳಿ ಎಂದು ರಾಜಣ್ಣ ಅವರಿಗೆ ಸೂಚನೆ ನೀಡಿ ಕಳಿಸಿದ್ದಾರೆ ಎಂದು ಗೊತ್ತಾಗಿದೆ. ಇಷ್ಟೆಲ್ಲ ಆದ ಮೇಲೂ ಇದನ್ನು ತನಿಖೆ ಮಾಡದೆ ಸುಮ್ಮನೆ ಬಿಡಬಾರದು ಎಂದು ಹೇಳಿದರು.

ರಾಜಣ್ಣ ಅವರು ಪರಿಶಿಷ್ಟ ವರ್ಗಕ್ಕೆ ಸೇರಿದವರು, ಒಂದು ಕಡೆ ಕಾಂಗ್ರೆಸ್‌ ಸರ್ಕಾರ ದಲಿತರ ಹಣವನ್ನು ಗ್ಯಾರಂಟಿಗೆ ದುರ್ಬಳಕೆ ಮಾಡುತ್ತಿದೆ. ಮತ್ತೊಂದು ಕಡೆ ಪರಿಶಿಷ್ಟ ವರ್ಗದವರ ಅಹವಾಲುಗಳನ್ನು ಆಲಿಸುತ್ತಿಲ್ಲ, ಕೂಡಲೇ ಸರ್ಕಾರ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸಚಿವ ಕೆ.ಎನ್‌.ರಾಜಣ್ಣ ಸದನದಲ್ಲೇ ಮಾತಾಡಿರು ವುದರಿಂದ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿ ಸಬೇಕು. ಅವರ ಹೇಳಿಕೆ ಈಗ ಸದನದ ಆಸ್ತಿಯಾಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಹನಿಟ್ರ್ಯಾಪ್‌ ನಡೆಯುತ್ತಿದೆ ಎಂದು ಛೇಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಮರ ಹಲಾಲ್‌ ಬಜೆಟ್‌ ಮಂಡಿಸಿದ್ದಾರೆ. ಹಿಂದುಳಿದ ಜನರ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡ ಲಾಗಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಅಶೋಕ್ ತಿಳಿಸಿದರು.