ಮೈಸೂರು: ಜಮೀನು ಸರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮೊಚ್ಚು ತೋರಿಸಿ ಬೆಂಕಿ ಉಗುಳಿ ಬೆದರಿಸಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಹನಗೋಡು ಹೋಬಳಿಯಲ್ಲಿ ನಡೆದಿದೆ.
ಶಿಂಡೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಲವ ಎಂಬಾತ ಮೊಚ್ಚು ತೋರಿಸಿ ಬೆಂಕಿ ಉಗುಳಿ ಬೆದರಿಸಿದ್ದಾನೆ.
ಸರ್ವೆ ಅಧಿಕಾರಿಗಳ ಜೊತೆ ಪೊಲೀಸರು ಇದ್ದರೂ ಈತ ಬೆದರಿಸಿದ್ದಾನೆ,ಈತ ಬೆಂಕಿ ಉಗುಳಿ ಬೆದರಿಕೆ ಹಾಕಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
ಹುಣಸೂರು ತಾಲೂಕು ಹನಗೋಡು ಹೋಬಳಿ ಶಿಂಡೇನಹಳ್ಳಿ ಗ್ರಾಮದ ಸರ್ವೆ ನಂ.66/12 ರ 4 ಎಕರೆ 3 ಗುಂಟೆ ಜಮೀನು ವಿವಾದವಿದ್ದು ನ್ಯಾಯಾಲಯದ ಮೆಟ್ಟಿಲೇರಿದೆ.
ಮಂಗಳವಾರಮ್ಮ ಹಾಗೂ ಲವ,ಕುಶ ಎಂಬುವರ ನಡುವೆ ವಿವಾದ ನಡೆದಿದ್ದು ಕೆಲವು ದಿನಗಳ ಹಿಂದೆ ಮಂಗಳವಾರಮ್ಮ ಪರವಾಗಿ ತೀರ್ಪು ನೀಡಲಾಗಿದೆ. ಹಾಗಾಗಿ ಜಮೀನು ಸರ್ವೆ ನಡೆಸಿ ರಕ್ಷಣೆ ಮಾಡಿಕೊಡುವಂತೆ ಸರ್ವೆ ಅಧಿಕಾರಿಗಳಿಗೆ ಎಸಿ ನ್ಯಾಯಾಲಯದಲ್ಲಿ ಆದೇಶವಾಗಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಸರ್ವೆ ಮಾಡಲು ಬಂದ ಅಧಿಕಾರಿಗಳ ಮೇಲೆ ಆವಾಜ್ ಹಾಕಿ ಹಿಂದೆ ಕಳಿಸಿದ ಪ್ರಕರಣಗಳೂ ನಡೆದಿವೆ.
ಸೂಕ್ತ ಪೊಲೀಸ್ ಬಂದೋ ಬಸ್ತ್ ನಡುವೆ ಎಡಿಎಲ್ ಆರ್ ಮಹಮದ್ ಹುಸೇನ್,ಸರ್ವೆ ಅಧಿಕಾರಿಗಳಾದ ಕುಮಾರ್,ಮಂಜು ಅವರು ಬಂದಾಗ ಲವ ಮೊಚ್ಚು ಸಮೇತ ಬಂದು ಬೆದರಿಕೆ ಹಾಕಿದ್ದಾನೆ.
ಪೊಲೀಸ್ ಸಿಬ್ಬಂದಿಗಳಿದ್ದರೂ ಕೇರ್ ಮಾಡದೆ ಆವಾಜ್ ಹಾಕಿದ್ದಲ್ಲದೆ ಸೀಮೆಣ್ಣೆ ಕುಡಿದು ಬೆಂಕಿ ಉಗುಳಿ ಬೆದರಿಕೆ ಹಾಕಿದ್ದಾನೆ.
ಪೊಲೀಸರು ಮಧ್ಯ ಪ್ರವೇಶಿಸಿ ಲವ ಕೈಲಿದ್ದ ಮೊಚ್ಚು ವಶಪಡಿಸಿಕೊಂಡಿದ್ದಾರೆ. ಲವ ನಿಗೆ ಕೆಂಡ, ಹರೀಶ, ಸೋಮೇಗೌಡ ಸಹಕರಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ದೂರು ದಾಖಲಿಸುವಂತೆ ಸೂಚಿಸಲಾಗಿದೆ.