ಮೈಸೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 20ನೇ ವಾರ್ಷಿಕ ಘಟಿಕೋತ್ಸವ ಇದೇ ಮಾ. 27ರಂದು ನಡೆಯಲಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ತಿಳಿಸಿದರು.
ಕೆಎಸ್ಒಯು ನಲ್ಲಿ ಬುಧವಾರ ಮಾಧ್ಯಮ ಘೋಷ್ಠಿಯಲ್ಲಿ ಕುಲಪತಿಗಳು ಘಟಿಕೋತ್ಸವ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ಮಾ. 27ರಂದು ಬೆಳಿಗ್ಗೆ 11 ಗಂಟೆಗೆ ಘಟಿಕೋತ್ಸವ ನಡೆಯಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಘಟಿಕೋತ್ಸವದಲ್ಲಿ ಉಪಸ್ಥಿತರಿರುತ್ತಾರೆ. ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಈ ಬಾರಿ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ, ಐಡಿಯಲ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಸಿ. ಎಂ. ಇರ್ಫಾನುಲ್ಲಾ ಷರೀಫ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಾಕ್ಷಾಯಿಣಿ ಎಸ್. ಅಪ್ಪಾ ಅವರುಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು ಎಂದು ಕುಲಪತಿಗಳು ತಿಳಿಸಿದರು.
ಈ ಬಾರಿಯ ಘಟಿಕೋತ್ಸವದಲ್ಲಿ 17348 ಅಭ್ಯರ್ಥಿಗಳು ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಇವರಲ್ಲಿ 6402 ಪುರುಷರು ಮತ್ತು 10946 ಮಹಿಳೆಯರಿದ್ದಾರು ಎಂದು ಹೇಳಿದರು.
ಈ ಬಾರಿ ಮೂವರಿಗೆ ಗೌರವ ಡಾಕ್ಟರೇಟ್, 41 ಮಂದಿಗೆ ಪಿಹೆಚ್. ಡಿ, 54 ಮಂದಿಗೆ ಚಿನ್ನದ ಪದಕಗಳು ಹಾಗೂ 58 ಮಂದಿಗೆ ನಗದು ಬಹುಮಾನ ವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೆಎಸ್ಒಯುನಲ್ಲಿ ಈ ಬಾರಿ ಒಟ್ಟು 25109 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17307 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಅವರು ತಿಳಿಸಿ, ಈ ಪೈಕಿ 10,929 ಮಂದಿ ಮಹಿಳೆಯರು ಮತ್ತು 6378 ಮಂದಿ ಪುರುಷರು ಇದ್ದಾರೆ ಎಂದು ಅವರು ವಿವರಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಕೆಎಸ್ಒಯು ಕುಲ ಸಚಿವರಾದ ಪ್ರೊ. ಕೆ. ಬಿ. ಪ್ರವೀಣ, ಡಾ. ಹೆಚ್. ವಿಶ್ವನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.