ಕೆಎಸ್ಒಯು 20ನೇ ಘಟಿಕೋತ್ಸವ:
ಮೂವರಿಗೆ ಗೌರವ ಡಾಕ್ಟರೇಟ್

ಮೈಸೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 20ನೇ ವಾರ್ಷಿಕ ಘಟಿಕೋತ್ಸವ ವಿಶೇಷವಾಗಿ ನೆರವೇರಿತು.

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ಬೆಳಿಗ್ಗೆ ನಡೆದ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ವಹಿಸಿದ್ದರು.

ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಘಟಿಕೋತ್ಸವ ಭಾಷಣ ಮಾಡಿ ದರು.

ಈ ಬಾರಿ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ, ಐಡಿಯಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ. ಎಂ. ಇರ್ಫಾನುಲ್ಲಾ ಷರೀಫ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಾಕ್ಷಾಯಿಣಿ ಎಸ್. ಅಪ್ಪಾ ಅವರುಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಆದರೆ ಇಂದಿನ ಸಮಾರಂಭಕ್ಕೆ ಸಚಿವ ಸತೀಶ್ ಜಾರಕಿಹೊಳಿ ಆಗಮಿಸಲಿಲ್ಲ ಹಾಗೂ ಉನ್ನತ ಶಿಕ್ಷಣ ಸಚಿವರು ಸಹ ಈ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.

ಈ ಬಾರಿಯ ಘಟಿಕೋತ್ಸವದಲ್ಲಿ 17348 ಅಭ್ಯರ್ಥಿಗಳು ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿದ್ದರು. ಇವರಲ್ಲಿ 6402 ಪುರುಷರು ಮತ್ತು 10946 ಮಹಿಳೆಯರು.

ಈ ಬಾರಿ ಮೂವರಿಗೆ ಗೌರವ ಡಾಕ್ಟರೇಟ್, 41 ಮಂದಿಗೆ ಪಿಹೆಚ್. ಡಿ, 54 ಮಂದಿಗೆ ಚಿನ್ನದ ಪದಕಗಳು ಹಾಗೂ 58 ಮಂದಿಗೆ ನಗದು ಬಹುಮಾನ ವಿತರಿಸಲಾಯಿತು.

ಕೆಎಸ್ಒಯುನಲ್ಲಿ ಈ ಬಾರಿ ಒಟ್ಟು 25109 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17307 ಮಂದಿ ಉತ್ತೀರ್ಣರಾಗಿದ್ದಾರೆ ಅದರಲ್ಲಿ 10,929 ಮಂದಿ ಮಹಿಳೆಯರು ಮತ್ತು 6378 ಮಂದಿ ಪುರುಷರು.

ಸಮಾರಂಭದಲ್ಲಿ ಕೆಎಸ್ಒಯು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲ ಸಚಿವರಾದ ಪ್ರೊ. ಕೆ. ಬಿ. ಪ್ರವೀಣ, ಡಾ. ಹೆಚ್. ವಿಶ್ವನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.