ಯತ್ನಾಳ್ ಹೊಸ ಪಕ್ಷ:ಯಡಿಯೂರಪ್ಪ ಓಲೈಕೆ ಬಿಡಲಿ-ಹೈಕಮಾಂಡ್ ಗೆ ಎಚ್ಚರಿಕೆ

ವಿಜಯಪುರ: ಬಿಜೆಪಿಯಿಂದ ನಾನು ಉಚ್ಛಾಟನೆಯಾಗಿಲ್ಲ,ಹೊರಗೂ ಬಂದಿಲ್ಲ,ಒಂದು ವೇಳೆ ಅವರಿಗೆ ಬುದ್ದಿ ಬಂದು ನನ್ನನ್ನ ಕರೆದರೆ ಇಲ್ಲೇ ಇರುತ್ತೇನೆ,ಇಲ್ಲದಿದ್ದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಕುಟುಂಬ ರಾಜಕಾರಣಕ್ಕೆ ಬೆಲೆ ಕೊಡುತ್ತಿದ್ದಾರೆ ಅವರು ಯಡಿಯೂರಪ್ಪ ಮತ್ತು ಅವರ ಕುಟುಂಬದವರನ್ನು ದೂರ ಇಡುವವರೆಗೂ ಅವರು ಉದ್ದಾರ ಆಗುವುದಿಲ್ಲ ಎಂದು ಹೇಳಿದರು.

ನನ್ನದೇನಿದ್ದರೂ ಇನ್ನು ಸಿಕ್ಸರ್ ಬಾರಿಸುವುದಷ್ಟೇ, ಫೋರ್, ಡಬಲ್,ಸಿಂಗಲ್ ಯಾವುದೂ ಇಲ್ಲ, ಸಿಕ್ಸರ್ ಹೊಡೆದೆ ನಾನು ಮುಂದಿನ ನಡೆ ತೀರ್ಮಾನಿಸುತ್ತೇನೆ, ಅನಿವಾರ್ಯವಾಗಿ ಹೊಸ ಪಕ್ಷ ಕಟ್ಟಬೇಕಾಗುತ್ತದೆ ಎಂದು ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು.

ಚುನಾವಣೆಗೆ ಇನ್ನು ಮೂರು ವರ್ಷಗಳು ಇದೆ ಅಲ್ಲಿಯವರೆಗೂ ನಮ್ಮ ಅಭಿಮಾನಿಗಳು ಮತ್ತು ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ನಮ್ಮ ಜನ ಏನು ತೀರ್ಮಾನ ತೆಗೆದುಕೊಳ್ಳುವಂತೆ ಹೇಳುತ್ತಾರೋ ನೋಡುತ್ತೇನೆ, ಬಿಜೆಪಿಯವರಿಗೆ ಬುದ್ಧಿ ಬಂದು ಯಡಿಯೂರಪ್ಪ ಕುಟುಂಬವನ್ನು ದೂರ ಇಟ್ಟು ಹಿಂದುತ್ವಕ್ಕೆ ಬೆಲೆಕೊಟ್ಟು ನನ್ನನ್ನು ಬೆಂಬಲಿಸಿದರೆ ಎಲ್ಲಿಯೂ ಹೋಗುವುದಿಲ್ಲ ಇಲ್ಲೇ ಮುಂದುವರೆಯುತ್ತೇನೆ ಇಲ್ಲದಿದ್ದರೆ ನಾನು ಪಕ್ಷ ಕಟ್ಟುತ್ತೇನೆ,ಪ್ರೊಸೆಸಿಂಗ್ ಪ್ರಾರಂಭ ವಾಗಿದೆ ಎಂದು ನೇರವಾಗಿ ಬಸನಗೌಡ ಪಾಟೀಲ್ ನುಡಿದರು.