ಜನರಿಗೆ ಮತ್ತೆ‌ ಬೆಲೆ ಏರಿಕೆ ಬರೆ ಎಳೆದ ಸರ್ಕಾರ

ಬೆಂಗಳೂರು: ಈಗಾಗಲೇ ಬೇಸಿಗೆಯ ಬಿಸಲು ಜನರ ತಲೆ ಸುಡುತ್ತಿದೆ, ಗ್ಯಾರಂಟಿಗಳ ಭಾರದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಒಂದೆಡೆ ಉಚಿತಗಳನ್ನು ಕೊಟ್ಟು ಮತ್ತೊಂದುಕಡೆಯಿಂದ ಜನರಿಂದ ಕಿತ್ತುಕೊಳ್ಳುತ್ತಿದೆ.

ಬಸ್, ಮೆಟ್ರೋ, ಹಾಲು, ಮೊಸರು, ವಿದ್ಯುತ್‌ ದರ ಏರಿಸಿದ್ದಾಯ್ತು ಈಗ ಲಿಫ್ಟ್, ಟ್ರಾನ್ಸ್‌ಫಾರ್ಮರ್‌, ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕವನ್ನೂ ಏರಿಕೆ ಮಾಡಿದೆ.

ರಾಜ್ಯ ಇಂಧನ ಇಲಾಖೆ ಲಿಫ್ಟ್, ಟ್ರಾನ್ಸ್‌ಫಾರ್ಮರ್‌, ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಹಿಂದೆ ಇದ್ದ ದರಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. 800 ರೂ. ನಿಂದ 1,000 ರೂ.ನಷ್ಟಿದ್ದ ಶುಲ್ಕದ ಮೊತ್ತವನ್ನ 5,000 ರೂ. ನಿಂದ 8,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಮನೆ, ಕಚೇರಿ, ಫ್ಯಾಕ್ಟರಿಗಳಿಗೆ 25 ಕೆವಿಎ ಟ್ರಾನ್ಸ್‌ಫಾರ್ಮರ್‌ ಹಾಕಿಸಿಕೊಂಡಿದ್ದರೆ ಅದನ್ನ ಪರಿಶೀಲನೆ ಮಾಡಲು 1,300 ರೂ.ನಿಂದ 1,500 ರೂ. ಶುಲ್ಕ ನೀಡಬೇಕಿತ್ತು, ಈಗ ಆ ದರವನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.

5 ರಿಂದ 10 ಕೆವಿಎ ಸಣ್ಣ ಜನರೇಟರ್ ಪರಿಶೀಲನೆ ಮತ್ತು ರಿನೀವಲ್‌ಗೆ 2 ಸಾವಿರ ರೂ. ಇದ್ದ ಶುಲ್ಕವನ್ನು 5 ರಿಂದ 8 ಸಾವಿರ ರೂ. ವರೆಗೆ ಏರಿಕೆ ಮಾಡಲಾಗಿದೆ, ರೈತರ ಐಪಿ ಸೆಟ್-25 ಕೆವಿ ವ್ಯಾಟ್‌ಗೆ 3 ಸಾವಿರ ಇದ್ದ ಶುಲ್ಕವನ್ನ 11,800 ರೂ.ಗಳಿಗೆ ಏರಿಕೆ ಮಾಡಿ ಜನರಿಗೆ ಬರೆ ಹಾಕಲಾಗುತ್ತಿದೆ.

ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಅಧಿಕಾರ ಹಿಡಿಯುವುದಕ್ಕೆ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದ ಸರ್ಕಾರ ಇದೀಗ ಒಂದೊಂದಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನರಿಂದ ತೆರಿಗೆ ವಸೂಲಿಗೆ ಪ್ಲ್ಯಾನ್‌ ಮಾಡಿದಂತಿದೆ.