ಮೈಸೂರು: ದುರ್ಗಾದೇವಿ ಮೆರವಣಿಗೆ ವೇಳೆ ಎರಡು ಯುವಕರ ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಬಂದ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಧಂಕಿ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಗಾಂಧಿನಗರದಲ್ಲಿ ಈ ಘಟನೆ ನಡೆದಿದ್ದು,ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ 12 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.
ಪುಂಡರು ಅವಾಚ್ಯ ಶಬ್ದಗಳಿಂದ ನಿಂದಿಸಿ ಠಾಣೆಯ ಮೇಲೆ ಕಲ್ಲು ಹೊಡೆಯುವುದಾಗಿ ಧಂಕಿ ಹಾಕಿದ್ದಾರೆ ಎಂದು ಮುಖ್ಯಪೇದೆ ಮೋಹನ್ ಅವರು ಪ್ರಕರಣ ದಾಖಲಿಸಿದ್ದಾರೆ.
ಯುಗಾದಿ ಹಬ್ಬದ ದಿನದಂದು ಗಾಂಧಿನಗರದ ಶ್ರೀ ದುರ್ಗಾದೇವಿ ದೇವಸ್ಥಾನದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಮೆರವಣಿಗೆ ಜೊತೆ ಸಾಗಲು ಎನ್.ಆರ್.ಠಾಣೆ ಪೊಲೀಸರನ್ನ ನಿಯೋಜಿಸಲಾಗಿತ್ತು.ಈ ಪೈಕಿ ಮುಖ್ಯಪೇದೆ ಮೋಹನ್ ಸಹ ಒಬ್ಬರು.
ಮಧ್ಯರಾತ್ರಿ ವೇಳೆ ಗಾಂಧಿನಗರದ ಶಿವಯೋಗಿ 3 ನೇ ಮುಖ್ಯರಸ್ತೆ ಬಳಿ ಬರುವಾಗ ಎರಡು ಗುಂಪಿನ ಯುವಕರು ಪರಸ್ಪರ ಗಲಾಟೆ ಪ್ರಾರಂಭಿಸಿದ್ದಾರೆ.
ಈ ವೇಳೆ ಮೋಹನ್ ಅವರು ಜಗಳ ಬಿಡಿಸಲು ಬಂದಾಗ ಯುವಕರು ಗುಂಪು ತಿರುಗಿ ಬಿದ್ದಿದೆ.ಅವಾಚ್ಯಶಬ್ದಗಳಿಂದ ನಿಂದಿಸಿ ಸಮವಸ್ತ್ರವನ್ನ ಹಿಡಿದು ಎಳೆದಾಡಿ ಹಲ್ಲೆ ನಡೆಸಿ, ಉದಯಗಿರಿ ಠಾಣೆ ಮೇಲೆ ಕಲ್ಲು ಎಸೆದಂತೆ ಎನ್.ಆರ್.ಠಾಣೆ ಮೇಲೂ ಕಲ್ಲು ಹೊಡೆಯುತ್ತೇವೆ ಎಂದು ಧಂಕಿ ಹಾಕಿದ್ದಾರೆ.
ಯುವಕರ ಗಪಿನ ನಡುವೆ ಸಿಲುಕಿ ಹಲ್ಲೆಗೆ ಒಳಗಾದ ಮೋಹನ್ ಅವರನ್ನ ಸಹದ್ಯೋಗಿಗಳು ಹಾಗೂ ಕೆಲವು ಸ್ಥಳೀಯರು ರಕ್ಷಿಸಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿ ಠಾಣೆ ಮೇಲೆ ಕಲ್ಲು ಹೊಡೆಯುವುದಾಗಿ ವಾರ್ನಿಂಗ್ ಕೊಟ್ಟ ಮಾದೇಶ್,ಗಿರೀಶ್.ಆ.ಬ್ಲೇಡ್,ರವಿಕುಮಾರ್,ಕಿರಣ್.ಆ.ಬಾತು,ರಾಘವೇಂದ್ರ,ದಾದಾ,ಕೀರ್ತಿ,ನಾಗೇಂದ್ರ ಸೇರಿದಂತೆ 12 ಮಂದಿ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.