ಅಸಮರ್ಥ ಗೃಹ ಸಚಿವರನ್ನು ಕೂಡಲೇ ಕಿತ್ತು ಹಾಕಿ:ಬಿಜೆಪಿ ಆಗ್ರಹ

ಬೆಂಗಳೂರು: ಗೃಹಸಚಿವ ಜಿ ಪರಮೇಶ್ವರ್ ಅವರ ಹೇಳಿಕೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸಿದೆ.

ಪರಮೇಶ್ವರ್ ಗೃಹಸಚಿವರಾದ ನಂತರ ಕಳೆದ ಎರುಡು ವರ್ಷಗಳಲ್ಲಿ ಪದ ಪದೇ ಅವರ ಹೇಳಿಕೆಯನ್ನು ನೋಡಿದಾಗ ಒಬ್ಬ ಅಸಮರ್ಥ, ಜತೆಗೆ ಒಂದು ರೀತಿಯ ಸಂವೇದನಾರಹಿತ, ಗೃಹಮಂತ್ರಿಗಳಾಗಿ ಕಂಡು ಬರುತ್ತಿದ್ದಾರೆ. ಅವರ ನಿನ್ನೆಯ ಹೇಳಿಕೆಯಂತೂ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಬಿಜೆಪಿ ಕರ್ನಾಟಕ ವಕ್ತಾರರಾದ ಎಂ.ಜಿ ಮಹೇಶ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌

ಮಹಿಳೆಯರ ಮೇಲೆ ಅವ್ಯಾಹತವಾದ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನಡೆಯುತ್ತಿದೆ,ಈ ಎಲ್ಲ ಸಂಗತಿಗಳ ಬಗ್ಗೆ ಅವರ ಹೇಳಿಕೆ ನಿಜಕ್ಕೂ ಒಬ್ಬ ಗೃಹ ಮಂತ್ರಿಗೆ ಶೋಭೆ ತರುವಂಥದ್ದಲ್ಲ ಎಂದಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿರ್ವಹಣೆ ಮಾಡಬೇಕಾದ ಪರಮೇಶ್ವರ್ ಅವರು ಈ ರೀತಿ ಕ್ಷುಲ್ಲಕ ಹೇಳಿಕೆ ಕೊಡುವ ಮೂಲಕ, ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡದೆ, ಕರ್ನಾಟಕದಲ್ಲಿ ಕ್ರಿಮಿನಲ್ ಗಳು, ಜಿಹಾದಿಗಳು ಹಾಗೂ ಮಿಕ್ಕ ಕೋಮು ಶಕ್ತಿಗಳ ಧ್ರುವೀಕರಣಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಕಂಡುಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರಕಾರ ಯಾವಾಗೆಲ್ಲ ಅಧಿಕಾರಕ್ಕೆ ಬರುತ್ತೋ ಆವಾಗೆಲ್ಲ ಈ ಕ್ರಿಮಿನಲ್‌ಗಳು, ಲೂಟಿಕೋರರು, ಭ್ರಷ್ಟರು ಹೆಚ್ಚಾಗುತ್ತಿದ್ದಾರೆ. ಈ ರೀತಿಯ ಕ್ರಿಮಿನಲ್ ಚಟುವಟಿಕೆಗಳಿಗೆ ಇಂಬುಕೊಡುವುದು ಹೆಚ್ಚಾಗುತ್ತಿದೆ,
ಆದ್ದರಿಂದ ಗೃಹಸಚಿವ ಡಾ ಜಿ. ಪರಮೇಶ್ವರ್ ಅವರು ನೀಡಿದ ಹೇಳಿಕೆಗಾಗಿ ಅವರು ರಾಜ್ಯದ ಜನತೆಯ ಕ್ಷಮಾಪಣೆ ಕೇಳಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.

ಈ ಗೃಹಮಂತ್ರಿಗಳು ರಾಜ್ಯದ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ಅಸಮರ್ಥರಾಗಿರುವುದರಿಂದ ಮುಖ್ಯಮಂತ್ರಿಗಳು ಕೂಡಲೇ ಅವರನ್ನು ಬದಲಾಯಿಸಿ ಉತ್ತಮ, ಸಮರ್ಥ ಗೃಹಮಂತ್ರಿಗಳನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನ ಸದ್ದುಗುಂಟೆಪಾಳ್ಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ವ್ಯಾಪಕ ಸುದ್ದಿಯಾಗುತ್ತಿದ್ದಂತೆ, ಗೃಹಸಚಿವರು ಪ್ರತಿಕ್ರಿಯಿಸಿ, ಬೆಂಗಳೂರು ದೊಡ್ಡ ನಗರ, ಅಲ್ಲೊಂದು-ಇಲ್ಲೊಂದು ಲೈಂಗಿಕ ಕಿರುಕುಳ ಘಟನೆಗಳು ಆಗುತ್ತವೆ ಎಂದು ಉಡಾಫೆ ಹೇಳಿಕೆ ನೀಡಿದ್ದರು, ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ಎಂ.ಜಿ ಮಹೇಶ್ ತಿಳಿಸಿದ್ದಾರೆ.