ಬೆಳಗಾವಿ: ಸಿಎಂ ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಕರ್ನಾಟಕವನ್ನು ಮಿನಿ ಪಾಕಿಸ್ತಾನವಾಗಿಸಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ ಅವರು, ಇದು ಬಿಜೆಪಿಯ ಆಕ್ರೋಶದ ಯಾತ್ರೆಯಲ್ಲ, ಜನರ ಆಕ್ರೋಶದ ಯಾತ್ರೆ. ಬೆಲೆ ಏರಿಕೆಯಿಂದಾಗಿ ಜನರಿಗೆ ತೊಂದರೆಯಾಗಿರುವುದರಿಂದ ಅವರಿಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
ಮುಸಲ್ಮಾನರು ನಂ.1 ಎಂದು ಆಗಲು ವಿದೇಶಿ ಕೈವಾಡ ಇದೆಯೇ ಎಂಬ ಅನುಮಾನ ಬಂದಿದೆ. ಮುಸ್ಲಿಮರ ಓಲೈಕೆಗಾಗಿ ಎಲ್ಲ ಜಾತಿಗಳನ್ನು ಒಡೆದುಹಾಕಿದ್ದಾರೆ. ಈ ಮೂಲಕ ಮಿನಿ ಪಾಕಿಸ್ತಾನ ಸೃಷ್ಟಿಸುತ್ತಿದ್ದಾರೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆಂದು ಕೆಲವು ಭಯೋತ್ಪಾದಕರು ಪತ್ರದಲ್ಲಿ ಬರೆದು ಹಂಚಿದ್ದಾರೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯನವರ ಕುರ್ಚಿಗೆ ನವೆಂಬರ್‌ನಲ್ಲಿ ಬಾಂಬ್ ಫಿಕ್ಸ್ ಆಗಿದೆ. ಅವರು ನಿರ್ಗಮಿಸುವುದರಿಂದಲೇ ಈ ರೀತಿ ಮಾಡುತ್ತಿದ್ದಾರೆ. ರಾಜ್ಯದ ಬಡವರ ಮೇಲೆ ತೆರಿಗೆಯ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣ ಕೇಂದ್ರ ಕಾಂಗ್ರೆಸ್‌ನ ಎಟಿಎಂ ಆಗಿದೆ. ಇದು ಕುರ್ಚಿಗಾಗಿ ನಡೆಯುತ್ತಿರುವ ರಾಜಕೀಯ ಎಂದು ಟೀಕಿಸಿದರು.
ರಾಜ್ಯದಲ್ಲಿ ಗೃಹ ಸಚಿವರೇ ಇಲ್ಲ. ಎಷ್ಟೇ ಅಪರಾಧ ನಡೆದರೂ ಇದು ಸಾಮಾನ್ಯ ಎಂದು ಡಾ.ಜಿ.ಪರಮೇಶ್ವರ್ ಹೇಳುತ್ತಾರೆ. ಮುಂದಿನ ಸಲ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹಾಲು, ಆಲ್ಕೋಹಾಲ್ ಹಾಗೂ ಡೆತ್ ಸರ್ಟಿಫಿಕೇಟ್‌ಗೂ ದರ ಏರಿಸಿದ್ದಾರೆ. ಕಸಕ್ಕೂ ತೆರಿಗೆ ಹಾಕಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕಸದ ಪ್ರಮಾಣ ಲೆಕ್ಕ ಹಾಕಿ ತೆರಿಗೆ ಹಾಕುತ್ತಾರೆ. ವಾಹನ ಪಾರ್ಕಿಂಗ್ ಮಾಡಿದರೂ ತೆರಿಗೆ ವಿಧಿಸುತ್ತಾರೆ ಎಂದು ಅಶೋಕ್ ಆರೋಪಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ರೂಪಿಸಿದ್ದ ಪತ್ರಿಕಾ ಸಂಸ್ಥೆಗೆ 50 ಲಕ್ಷ ರೂ. ಬಂಡವಾಳ ಹೂಡಿ, ಇಡೀ 7,500 ಕೋಟಿ ರೂ. ಹಣವನ್ನು ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಲೂಟಿ ಮಾಡಿದ್ದಾರೆ. ಇದು ಕೋರ್ಟ್ ಆದೇಶದ ಪ್ರಕಾರ ನಡೆದಿರುವ ತನಿಖೆ. ಆದರೆ ಕಾಂಗ್ರೆಸ್ ನಾಯಕರು ಇದರ ವಿರುದ್ಧ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇಂತಹ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್ ಯಾವ ನೈತಿಕೆಯ ಮೇಲೆ ಬಿಜೆಪಿಯ ಮೇಲೆ ಆರೋಪ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯನವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಲ್ಲ ಅಧಿಕಾರ ನೀಡಿದ್ದರು. ಅಧಿಕಾರ ಸಿಗದೇ ಹೋದಾಗ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದರು. ಈಗ ಡಿ.ಕೆ.ಶಿವಕುಮಾರ್ ಅಧಿಕಾರ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.