ಬೆಳಗಾವಿ: ಮುಸಲ್ಮಾನರಿಗೆ, ಹಿಂದುಳಿದವರಿಗೆ ಮಾತ್ರವಲ್ಲದೆ ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು ಸಾಮಾಜಿಕ ಆರ್ಥಿಕ ಶಕ್ತಿ ತುಂಬಬೇಕು ಎಂಬುದೇ ನಮ್ಮ ಗುರಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿ ಸಾಂಭ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮೂಲ ಪ್ರತಿ ಮುಖ್ಯಮಂತ್ರಿಗಳ ಬಳಿಯಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಆಶೋಕ್ ಯಾವತ್ತಾದರೂ ಸತ್ಯವನ್ನು ಹೇಳಿದ್ದಾರೆಯೇ
ಎಂದು ಪ್ರಶ್ನಿಸಿದರು.
ಅಶೋಕ ಸುಳ್ಳೇ ಹೇಳುವುದು ಮೂಲ ಪ್ರತಿ ನನ್ನ ಬಳಿ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಿಎಂ, ರಾಹುಲ್ ಗಾಂಧಿಯವರಿಗೆ ನಾವು ಪತ್ರ ಬರೆದಿಲ್ಲ ಆದರೆ ಅವರೊಂದಿಗೆ ಚರ್ಚೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವರದಿಯನ್ನು ಮಂಡಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಶಾಸಕರೇ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಚಿವ ಸಂಪುಟ ಸಭೆಯಲ್ಲಿ ಯಾರೂ ಈ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ,ಯಾರೂ ಜೋರಾಗಿ ಮಾತನಾಡಿಲ್ಲ ಸಮೀಕ್ಷೆಯನ್ನು ಓದಿಕೊಂಡು ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಲಾಗಿದೆ. ಸಚಿವರು ಅಭಿಪ್ರಾಯ ತಿಳಿಸಿದ ನಂತರ ಪುನ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಸಿಎಂ ಹೇಳಿದರು.
ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ,ಹಾಗಾಗಿ ಯಾತಿಗೂ ಅನ್ಯಾಯ ಆಗಬಾರದು, ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿದ್ದರೂ ಬಡವ ಬಡವನಾಗಿಯೇ ಉಳಿಯಬೇಕೆ ಸಮಾನತೆ ಬೇಡವೇ, ಜಾತಿಗೆ ಅಂಟಿಕೊಂಡೇ ಇರಬೇಕೆ ಎಂದು ಸಿದ್ದರಾಮಯ್ಯ ಗರಂ ಆಗಿ ನುಡಿದರು.