ಸಿಎಂ ಅಭಿವೃದ್ಧಿ ಬಗ್ಗೆ ಯೋಚಿಸದೆ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತಿದ್ದಾರೆ -ಅಶೋಕ್

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಬರೆದ ಪತ್ರದ ಪ್ರಕಾರ, ಜಾತಿ ಗಣತಿ ವರದಿಯ ಮೂಲ ಪ್ರತಿ ಲಭ್ಯವಾಗಿಲ್ಲ, ಈಗ ಇರುವುದು ನಕಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸದೆ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ, ಒಂದು ರಸ್ತೆ ಕೂಡ ನಿರ್ಮಾಣವಾಗಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್‌ ಸಚಿವರೇ ಇದನ್ನು ವೈಜ್ಞಾನಿಕ ಹಾಗೂ ಅಸಲಿ ಎಂದು ಹೇಳುತ್ತಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ವರದಿ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 26-08-2021 ರಂದು ಸೀಲ್‌ ಮಾಡಿದ ಬಾಕ್ಸ್‌ ತೆರೆದಾಗ ವರದಿಯಲ್ಲಿ ಆಯೋಗದ ಹಿಂದಿನ ಅಧ್ಯಕ್ಷರ ಸಹಿ ಇಲ್ಲ ಎಂಬುದನ್ನು ಗಮನಿಸಲಾಗಿದೆ. ಹಸ್ತಪ್ರತಿ ಅಥವಾ ಮೂಲ ವರದಿ ಲಭ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ಅಧ್ಯಕ್ಷ ಕಾಂತರಾಜು ಸಹಿ ಹಾಕದೆ ಓಡಿಹೋಗಿದ್ದಾರೆ. ಮೂಲ ವರದಿ ಸಿಎಂ ಸಿದ್ದರಾಮಯ್ಯನವರ ಮನೆಯಲ್ಲಿದೆ. ಬೇಕಾದ ಜಾತಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಸಚಿವ ಸಂಪುಟದಲ್ಲಿ ಗಲಾಟೆಯಾಗಿದೆ. ಯಾರ ಮನೆಗೂ ಹೋಗದೆ ಸಮೀಕ್ಷೆ ಮಾಡಲಾಗಿದೆ. ಎಲ್ಲರೂ ಸಿದ್ದರಾಮಯ್ಯನವರ ಮನೆ, ಕಚೇರಿಯಲ್ಲಿ ಕುಳಿತು ವರದಿ ತಯಾರಿಸಿದ್ದಾರೆ.150 ಕೋಟಿ ರೂ. ಎಲ್ಲಿ ಹೋಗಿದೆ ಎಂದು ಸರ್ಕಾರ ತಿಳಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಗಾಂಧಿ ಕುಟುಂಬದವರು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು 2008 ರಲ್ಲಿ ಮುಚ್ಚಿಹಾಕಿದ್ದರು. ಆ ಸಂಸ್ಥೆಗೆ ವಿವಿಧೆಡೆ ಎರಡೂವರೆ ಸಾವಿರ ಕೋಟಿ ರೂ. ಆಸ್ತಿ ಇತ್ತು. ಆ ಸಂಸ್ಥೆಯನ್ನೇ ಯಂಗ್‌ ಇಂಡಿಯಾ ಸಂಸ್ಥೆಯಾಗಿ ಬದಲಿಸಿ ಚಾರಿಟೇಬಲ್‌ ಉದ್ದೇಶ ಎಂದು ತೋರಿಸಲಾಯಿತು. ಆದರೆ ಯಾವುದೇ ಸಾಮಾಜಿಕ ಕಾರ್ಯ ಮಾಡಲಿಲ್ಲ. ಗಾಂಧಿ ಕುಟುಂಬದಲ್ಲೇ ಎರಡು ಷೇರಿನಂತೆ ಒಟ್ಟು ಶೇ.38 ರಷ್ಟು ಷೇರು ಪಡೆಯಲಾಯಿತು. ಕೇವಲ 50 ಲಕ್ಷ ರೂ. ಹೂಡಿಕೆ ಮಾಡಿ ಎರಡೂವರೆ ಸಾವಿರ ಕೋಟಿ ರೂ. ಆಸ್ತಿಯನ್ನು ಗಾಂಧಿ ಕುಟುಂಬ ಪಡೆದಿದೆ. ಒಟ್ಟು 5,000 ಜನರು ಷೇರುದಾರರು ಇದ್ದರೂ, ಅವರು ಯಾರು ಎಂದು ಪತ್ತೆಯಾಗಿಲ್ಲ ಎಂದು ಆರೋಪಿಸಿದರು ‌

ಇದು ಸ್ವಾತಂತ್ರ್ಯ ಹೋರಾಟಗಾರರು ಆರಂಭಿಸಿದ ಪತ್ರಿಕೆಯೇ ಹೊರತು ಕಾಂಗ್ರೆಸ್‌ ಪಕ್ಷದ ಪತ್ರಿಕೆಯಲ್ಲ. ಜನದ ಧ್ವನಿಯಾಗಬೇಕಾದ ಪತ್ರಿಕೆ ಒಂದು ಕುಟುಂಬದ ಸ್ವತ್ತಾಗಿದೆ. ಕೋರ್ಟ್‌ ಕೂಡ ಈ ಪ್ರಕರಣವನ್ನು ವಜಾ ಮಾಡಿಲ್ಲ. ಇದು ಸರ್ಕಾರದ ಆಸ್ತಿಯೇ ಹೊರತು ಕಾಂಗ್ರೆಸ್‌ ನಾಯಕರ ಆಸ್ತಿಯಲ್ಲ. ಕಾಂಗ್ರೆಸ್‌ ಇದರ ವಿರುದ್ಧ ಹೋರಾಟ ಮಾಡುವುದು ಬೂಟಾಟಿಕೆ ಎಂದು ವ್ಯಂಗ್ಯವಾಡಿದರು.

ಪಿಎಸ್‌ಐ ಪರಶುರಾಮ್‌ ಅವರ ಪತ್ನಿ ಈಗ ಸಂಕಷ್ಟಲ್ಲಿದ್ದಾರೆ. ಸರ್ಕಾರಿ ಕೆಲಸ ಕೊಡುತ್ತೇವೆಂದು ಹೇಳಿ ಸರ್ಕಾರ ಇನ್ನೂ ಕೊಟ್ಟಿಲ್ಲ, ಈಗ ಆ ಪ್ರಕರಣಕ್ಕೆ ಬಿ ರಿಪೋರ್ಟ್‌ ನೀಡಲಾಗಿದೆ. ವರ್ಗಾವಣೆಯ ಕಿರುಕುಳದಿಂದಲೇ ಅವರು ಸತ್ತಿದ್ದರು. ಆದರೆ ಸರ್ಕಾರ ಈ ಸಾವಿಗೆ ನ್ಯಾಯ ನೀಡಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಸಿಇಟಿ ಪರೀಕ್ಷೆಯಲ್ಲಿ ಒಬ್ಬ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಬಿಸಾಡಲಾಗಿದೆ. ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನೇ ಸರ್ಕಾರ ಕಿತ್ತುಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.