ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಭದ್ರತಾ ಪಡೆ

ಶ್ರೀನಗರ: ಭದ್ರತಾ ಪಡೆಯು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಮುಂದಾಗುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ.

ಇಬ್ಬರು ಭಯೋತ್ಪಾದಕರು ಬಾರಾಮುಲ್ಲಾದ ಉರಿ ನಾಲಾದ ಸರ್ಜೀವನ್ ಪ್ರದೇಶದ ಮೂಲಕ ಒಳನುಸುಳಲು ಪ್ರಯತ್ನಿಸಿದ್ದರು.

ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರನ್ನು ತಡೆದಿದ್ದು, ಈ ವೇಳೆ ಗುಂಡಿನ ಚಕಮಕಿ ಸತತ 1 ಗಂಟೆಯ ಕಾರ್ಯಾಚರಣೆ ನಂತರ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸ ಲಾಗಿದೆ.

ಈ ವೇಳೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದ್ದು ಕಾರ್ಯಾಚರಣೆ ಮುಂದುವರಿದಿದೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಒಂದು ಘಟನೆಯ ನಂತರ ಈ ಕಾರ್ಯಾಚರಣೆ ನಡೆದಿದೆ. ಪಹಲ್ಗಾಮ್ ಭಯೋತ್ಪಾದಕರ ದಾಳಿಯಲಿ 26 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಪ್ರಧಾನಿ ಮೋದಿಯವರು ತೀವ್ರವಾಗಿ ಖಂಡಿಸಿದ್ದಾರೆ. ಈ ಘೋರ ಕೃತ್ಯದ ಹಿಂದಿರುವವರನ್ನು ಬಿಡಲಾಗುವುದಿಲ್ಲ. ಅವರ ದುಷ್ಟ ಕಾರ್ಯಸೂಚಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಮತ್ತು ಅದು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೋದಿ ಸೌದಿ ಅರೇಬಿಯಾದ ತಮ್ಮ ಪ್ರವಾಸವನ್ನು ಅರ್ಧಕ್ಕೆ ಕೈಬಿಟ್ಟು ಬುಧವಾರ ಬೆಳಗ್ಗೆ ಭಾರತಕ್ಕೆ ಹಿಂತಿರುಗಿದರು.

ತಕ್ಷಣ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಭೆ ನಡೆಸಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.