ಉಗ್ರರ ಸದೆಬಡೆಯಲು ಕೇಂದ್ರಕ್ಕೆ ಪೂರ್ಣ ಬೆಂಬಲ:ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ-ಸಿಎಂ

ಬೆಂಗಳೂರು: ಕಾಶ್ಮೀರದ ಪೆಹಲ್ಗಾಮನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಲಾಗಿದ್ದು, ಸಂಕಷ್ಟದಲ್ಲಿ ರುವ ಕನ್ನಡಿಗರ ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಮತ್ತೀಕೆರೆಯಲ್ಲಿರುವ ಭರತ್ ಭೂಷಣ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ ನಂತರ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿ ದರು.

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಭರತ್ ಭೂಷಣ್ ಅವರಿಗೆ ಕನ್ನಡ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸಿ ದ್ದೇನೆ, ಉತ್ತಮ ಶಿಕ್ಷಣ ಪಡೆದಿದ್ದ ತರುಣರಾಗಿದ್ದ ಭರತ್ ಭೂಷಣ್ ಅವರು ಉಗ್ರರ ದಾಳಿಗೆ ಬಲಿಯಾಗಿರು ವುದು ದುರದೃಷ್ಟಕರ. ಉಗ್ರರ ದಾಳಿ ಅಮಾನವೀಯ ಕೃತ್ಯವಾಗಿದ್ದು,ಅದನ್ನು ತೀವ್ರವಾಗಿ ಖಂಡಿಸುತ್ತೇನೆ‌ ಎಂದು ತಿಳಿಸಿದರು.

ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿ ಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಮ್ಮ ಸರ್ಕಾರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ,ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಅಮಾಯಕ ಜನರನ್ನು ಹಾಡುಹಗಲೇ, ತಮ್ಮ ಕುಟುಂಬದವರ ಎದುರು ಕೊಲ್ಲುವುದು ಅತ್ಯಂತ ಹ್ಯೇಯಕೃತ್ಯ ಎಂದು ಸಿಎಂ ತಿಳಿಸಿದರು.

ಕಾಶ್ಮೀರದಲ್ಲಿ ಈ ಹಿಂದೆಯೂ ಪುಲ್ವಾಮಾ ಬಾಲಾಕೋಟ್ ಘಟನೆ ನಡೆದಿದ್ದು, ಪುನ: ಅಂತಹ ಘಟನೆ ಮರುಕಳಿಸಿದೆ. ಇಂತಹ ಘಟನೆ ನಡೆಯಲು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಕನ್ನಡಿಗರಾದ ಭರತ್ ಭೂಷಣ್, ಮಂಜುನಾಥ್ ರಾವ್ ಹಾಗೂ ಬೆಂಗಳೂರಿನಲ್ಲಿ ನೆಲಿಸಿದ್ದ ಮಧುಸೂದನ್ ಅವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಭರತ್ ಭೂಷಣ್ ಕುಟುಂಬದೊಂದಿಗೆ ಸಚಿವ ರಾಮಲಿಂಗಾರೆಡ್ಡಿಯವರನ್ನು ಹಾಗೂ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಕುಟುಂಬದವರನ್ನು ಸಚಿವ ಮಧುಬಂಗಾರಪ್ಪ ಅವರು ಭೇಟಿಯಾಗಿದ್ದು, ಕುಟುಂಬಕ್ಕೆ ಸಹಕಾರ ನೀಡುವಂತೆ ಸೂಚನೆ ನೀಡಲಾಗಿದೆ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಕುಟುಂಬಗಳಿಗೆ ಸರ್ಕಾರದ ಬೆಂಬಲವಿದೆ ಎಂದು ನುಡಿದರು‌

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಹಾಗೂ ಘಟನೆಯಲ್ಲಿ ಮೃತಪಟ್ಟವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ಕರೆತರುವ ವ್ಯವಸ್ಥೆಗಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಅಧಿಕಾರಿಗಳ ತಂಡವನ್ನು ಕೂಡಲೇ ಕಳುಹಿಸಿಕೊಡಲಾಗಿತ್ತು. 175 ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುತ್ತಿದೆ. ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಉಗ್ರರನ್ನು ಮಟ್ಟ ಹಾಕುವ ಇನ್ನೂ ಹೆಚ್ಚಿನ ಕ್ರಮಗಳಿಗೆ ರಾಜ್ಯಸರ್ಕಾರದ ಸಂಪೂರ್ಣ ಬೆಂಬಲವಿರಲಿದೆ ಎಂದು ಪುನರುಚ್ಛರಿಸಿದರು.