ಯಾರು ಎಷ್ಟೇ ಕುತಂತ್ರ ಮಾಡಿದರೂ ಗೆಲುವು ನಮ್ಮದೇ -ಡಿಕೆಶಿ

ಬೆಂಗಳೂರು: ಯಾರು ಎಷ್ಟೇ ಕುತಂತ್ರ ಮಾಡಿದರೂ ಗೆಲುವು ನಮ್ಮದೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಶಿರಾ ವಿಧಾನಸಭಾ ಕ್ಷೇತ್ರದ ನೂರಕ್ಕೂ ಹೆಚ್ಚು ಸ್ಥಳೀಯ ನಾಯಕರು ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಡಿಕೆಶಿ ಮಾತನಾಡಿದರು.
ಈ ಕ್ಷೇತ್ರದಲ್ಲಿ ಯಾವುದೇ ಪಕ್ಷ ಯಾವುದೇ ಕುತಂತ್ರ ಮಾಡಿದರೂ ಇಲ್ಲಿ ಜಯ ನಮ್ಮದು ಎಂದರು.
ಸರ್ಕಾರ ಇದೆ ಹೀಗಾಗಿ ಉಪಚುನಾವಣೆ ಗೆಲ್ಲುತ್ತೇವೆ ಎಂದು ಹೇಳುತ್ತಿರುವ ಸಮಯದಲ್ಲಿ ನೂರಾರು ಸ್ಥಳೀಯ ನಾಯಕರು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿವೆ ಎಂದರೆ ಇದು ಪ್ರಮುಖ ಬೆಳವಣಿಗೆಯಾಗಿದೆ ಎಂದು ಶಿವಕುಮಾರ್ ಹೇಳಿದರು.
ಈ ಚುನಾವಣೆ ಟಿ.ಬಿ ಜಯಚಂದ್ರ, ಡಾ.ಜಿ ಪರಮೇಶ್ವರ್, ರಾಜಣ್ಣ ಹಾಗೂ ಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ. ನಾನು, ಸಿದ್ದರಾಮಯ್ಯನವರು ಹಾಗೂ ಪಕ್ಷದ ಇತರ ಹಿರಿಯ ನಾಯಕರು ಇವರ ಜತೆ ಜವಾಬ್ದಾರಿ ಹೊರುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂದು ಶಿಫಾರಸ್ಸು ಮಾಡಲು ಈಗಾಗಲೇ ಚರ್ಚೆ ನಡೆಸಿದ್ದೇವೆ. ಇಂದು ದೆಹಲಿಗೆ ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಲಾಗುವುದು ಎಂದವರು ಹೇಳಿದರು.
ಕಾಂಗ್ರೆಸ್ ಸೇರಲು ಬಹಳ ಸಂಖ್ಯೆಯಲ್ಲಿ ಯುವಕರು ಉತ್ಸಾಹ ತೋರುತ್ತಿದ್ದಾರೆ. ಇವರ ಆಗಮನ ಪಕ್ಷಕ್ಕೆ ಜಯ ತಂದುಕೊಡಲಿದೆ ಎಂಬ ವಿಶ್ವಾಸ ಇದೆ ಎಂದರು.