ಡಿ.ಕೆ.ಶಿವಕುಮಾರ್ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ ಅಲ್ಲ -ಡಾ.ಕೆ.ಸುಧಾಕರ್

ಮೈಸೂರು: ಡಿ.ಕೆ.ಶಿವಕುಮಾರ್ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಡಿಕೆಶಿ ಪ್ರಾಮಾಣಿಕರಾಗಿದ್ದರೆ ತನಿಖೆಯಿಂದ ಸಾಬೀತಾಗಲಿ. ಅದನ್ನು ಬಿಟ್ಟು ಎಲ್ಲದಕ್ಕೂ ರಾಜಕೀಯ ಬೆರಸುವುದು ಬೇಡ ಎಂದು ಡಾ.ಸುಧಾಕರ್ ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯಗಿಂತ ದೊಡ್ಡ ನಾಯಕರಲ್ಲ. ರಾಜಕೀಯ ಪ್ರೇರಿತವಾಗಿದ್ದರೆ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಬೇಕಿತ್ತು ಅಲ್ವಾ? ಎಂದು ಸುಧಾಕರ್ ಕೇಳಿದರು.
ಡಿಕೆಶಿ ಮೇಲೆಯೇ ಏಕೆ ದಾಳಿಯಾಗುತ್ತಿದೆ. ಇದು ಅವರು ಪರಿಶುದ್ಧರು ಎಂಬುದನ್ನು ಸಾಬೀತುಪಡಿಸಲು ಅವಕಾಶ. ತನಿಖೆಯಾಗಲಿ, ತನಿಖೆ ಮೂಲಕ ಸತ್ಯಾಂಶ ಹೊರ ಬೀಳಲಿ ಎಂದು ಸುಧಾಕರ್ ಹೇಳಿದರು.
ಚುನಾವಣೆಗೂ ಸಿಬಿಐ ದಾಳಿಗೂ ಸಂಬಂಧವೇ ಇಲ್ಲ ಎಂದವರು ಹೇಳಿದರು.
ಎರಡು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದೆ. ಒಂದು ವೇಳೆ ಆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಯಿತು ಅಂತಲೇ ಅಂದುಕೊಳ್ಳೋಣ. ಸರ್ಕಾರಕ್ಕೆ ಆಗುವ ನಷ್ಟ ಏನು ಎಂದು ಡಾ.ಕೆ.ಸುಧಾಕರ್ ಪ್ರಶ್ನಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಮಿತ್ ಶಾ ಮೇಲೆ ದಾಳಿ ನಡೆಸಲಾಗಿತ್ತು. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಜೈಲಿಗೆ ಹಾಕಲಾಗಿತ್ತು. ಹಾಗಾದರೆ ಅದೆಲ್ಲವನ್ನೂ ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿಯೇ ಮಾಡಿತು ಅಂದುಕೊಳ್ಳಬಹುದಾ? ಎಂದರು.