ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರರು ಜಮ್ನಾಲಾಲ್ ಪ್ರಶಸ್ತಿ ಪುರಸ್ಕೃತರಾದ ಮತ್ತು ತಗಡೂರು ಗಾಂಧಿ ಎಂದು ಪ್ರಖ್ಯಾತರಾದ ದಿವಂಗತ ತಗಡೂರು ರಾಮಚಂದ್ರ ರಾವ್ ಅವರ 122ನೇ ಜನ್ಮದಿನೋತ್ಸವದ ಅಂಗವಾಗಿ ಅವರ ಪ್ರತಿಮೆಗೆ ಶಾಸಕ ಎಸ್.ಎ ರಾಮದಾಸ್ ಮಾಲಾರ್ಪಣೆ ಮಾಡಿ, ‘ಸ್ವತಂತ್ರಪೂರ್ವ ಮೈಸೂರು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ನಂತರ ಮಾತನಾಡಿದ ರಾಮದಾಸ್ ರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿಯನ್ನು ದೇಶಾದ್ಯಂತ ತೀವ್ರಗೊಳಿಸಿದ್ದ ಸಂದರ್ಭದಲ್ಲಿ ಕರ್ನಾಟಕದ ಗಾಂಧಿ ಎಂದೇ ಪ್ರಖ್ಯಾತರಾಗಿದ್ದ ತಗಡೂರು ರಾಮಚಂದ್ರರಾವ್ ಅವರು ಪ್ರಮುಖರು ಎಂದರು.
ನಂತರ ಮಾತನಾಡಿದ ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ ಡಾ ಕೆ.ರಘುರಾಂ ವಾಜಪೇಯಿ, ರಾಮಚಂದ್ರ ರಾಯರು ಸ್ವತಂತ್ರ ಪೂರ್ವದಲ್ಲೇ ಬಡವರು ಹಾಗೂ ದೀನ ದಲಿತರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು. 1934ರಲ್ಲಿ ಗಾಂಧೀಜಿಯವರು ಮೈಸೂರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಎಲ್ಲ ಅಡೆತಡೆಗಳ ನಡುವೆ ಅವರನ್ನು ತಗಡೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಗಾಂಧೀಜಿಯವರಿಂದ ಭಾಷಣ ಮಾಡಿಸಿ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು ಎಂದು ತಿಳಿಸಿದರು.
ತಾತಯ್ಯನವರ ಸಹಕಾರದಿಂದ ಮೈಸೂರಿನ ಲ್ಯಾನ್ಸ್ ಡೌನ್ ಕಟ್ಟಡದಲ್ಲಿ ಖದ್ದರ್ ಕೋಆಪರೇಟಿವ್ ಸೊಸೈಟಿಯನ್ನು ಆರಂಭಿಸಿ ಖಾದಿ ಬಟ್ಟೆಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. ಆ ಕಾಲಕ್ಕೇ ಸ್ವದೇಶಿ ಆಂದೋಲನವನ್ನು ಆಯೋಜಿಸಿ ಗಾಂಧೀಜಿ ಅವರ ಪ್ರೇರಣೆಯಿಂದ ಪ್ರತಿಯೊಬ್ಬರೂ ಖಾದಿ ಉಡುಗೆ ತೊಟ್ಟು ದೇಶಪ್ರೇಮ ಮೆರೆಯುವಂತೆ ಪೆÇ್ರೀತ್ಸಾಹ ನೀಡುತ್ತಿದ್ದರು ಎಂದರು.
ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಮೂಗೂರು ಕರ್ನಾಟಕ ಸಂಘದ ಅಧ್ಯಕ್ಷ ವಿಶ್ವನಾಥ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್, ಮಾಜಿ ಮಹಾಪೌರರಾದ ಆರ್ ಜೆ ನರಸಿಂಹ ಅಯ್ಯಂಗಾರ್, ಯುವ ಮುಖಂಡರಾದ ಎಂ ಎನ್ ನವೀನ್ ಕುಮಾರ್, ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮಪ್ರಸಾದ್, ಎಂ ಸಿ ರಮೇಶ್, ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರಾದ ಮಹೇಶ್ ಶೆಣೈ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಸುಚೀಂದ್ರ, ಚಕ್ರಪಾಣಿ, ರಾಜಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.