ಮೈಸೂರು: ‘ಯೋಗಕ್ಷೇಮ ಯಾತ್ರೆ’ ಸಪ್ತಾಹ ಕಾರ್ಯಕ್ರಮ ಸಂಬಂಧ ಶಾಸಕ ಎಸ್.ಎ. ರಾಮದಾಸ್ ರವರು 5ನೇ ದಿನದ ಯೋಗಕ್ಷೇಮ ಯಾತ್ರೆಯನ್ನು ಶುಕ್ರವಾರ ನಗರದ ವಾರ್ಡ್ ನಂ. 64, 57 ಮತ್ತು 59 ರಲ್ಲಿ ನಡೆಸಿದರು.
ವಾರ್ಡ್ ನಂ. 64ರ ವಿವೇಕಾನಂದ ನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ 5ನೇ ದಿನದ ಯೋಗಕ್ಷೇಮ ಯಾತ್ರೆಯನ್ನು ಆರಂಭಿಸಿದರು.
ಶ್ರೀರಾಂಪುರದ 4ನೇ ಮುಖ್ಯ ರಸ್ತೆಯ ಬದಿಯಲ್ಲಿ ಗಿಡ ಗಂಟೆಗಳು, ಹಳೆ ಮರಗಳು ಬಿದ್ದಿದ್ದನ್ನು ಗಮನಿಸಿದ ಶಾಸಕರು ಅಲ್ಲಿದ್ದ ಅಧಿಕಾರಿಗಳನ್ನು ಕರೆದು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು.
ಶ್ರೀರಾಂಪುರದ 3ನೇ ಹಂತದ ನಿವಾಸಿಗಳು ಶಾಸಕರ ಬಳಿಯಲ್ಲಿ ನೀರಿನ ಸಮಸ್ಯೆಯನ್ನು ಹೇಳಿಕೊಂಡಾಗ ಇನ್ನು ಕೆಲವೇ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಶ್ರೀರಾಂಪುರದ 2ನೇ ಹಂತದಲ್ಲಿರುವ ಶಿವ ದೇವಾಲಯಕ್ಕೆ ಭೇಟಿ ನೀಡಿ ದೇವರದರ್ಶನ ಪಡೆದು ಅರವಿಂದ ನಗರದಲ್ಲಿ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದರು.
ನಂತರ ಜನನಿ ಜನ್ಮಭೂಮಿ ಸಮುದಾಯ ಭವನದಲ್ಲಿ ಯೋಗಕ್ಷೇಮ ಯಾತ್ರೆಯ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಸಕರು ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗಾವಕಾಶಗಳು ಇರುವೆಡೆ ಅವರಿಗೆ ಕೆಲಸ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಉಪಾಧ್ಯಕ್ಷರಾದ ಗಿರೀಶ್, ನಗರಪಾಲಿಕೆ ಸದಸ್ಯ ಮಾಜಿ ಮಾಯಾ ಜಗದೀಶ್, ಬಿಜೆಪಿ ಮೈಸೂರು ನಗರ ಮಹಿಳಾಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನಾಗರತ್ನ, ಬಿ.ಜೆ.ಪಿ ಕೆ.ಆರ್. ಕ್ಷೇತ್ರದ ಪ್ರಧಾನಕಾರ್ಯದರ್ಶಿಗಳಾದ ನೂರ್ ಫಾತಿಮಾ, ನಾಗೇಂದ್ರ, ಬಿಜೆಪಿ ಕೆ.ಆರ್ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಪ್ರಸಾದ್ ಬಾಬು, ಬಿಜೆಪಿ ಕೆ.ಆರ್.ಕ್ಷೇತ್ರದ ಹಿರಿಯರಾದ ಮೈ.ಪು ರಾಜೇಶ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.