ಡಾ.ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಶಿವರಾಮ ಕಾರಂತ “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ.
ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ.
ಇದ್ದ ಬುದ್ಧಿಯನ್ನು ಬಳಸಿ, ಸಾಧ್ಯವಾದರೆ ಬೆಳೆಸಿ ಎಂದು ಹೇಳುತ್ತಿದ್ದರು ಕಾರಂತರು.
ಆಧುನಿಕ ವಿದ್ಯಾಭ್ಯಾಸ ಕೇವಲ ಹೊಟ್ಟೆಪಾಡಿಗಾಗಿ ಎನ್ನುವುದು ಅವರ ಅಭಿಪ್ರಾಯ. ನಿಜವಾದ ವ್ಯಕ್ತಿತ್ವದ ವಿಕಸನವಾದರೆ ಅದೇ ನಿಜವಾದ ಶಿಕ್ಷಣವೆನ್ನುವುದು ಅವರ ಅಭಿಪ್ರಾಯವಾಗಿತ್ತು.
1920ರಲ್ಲಿ ಗಾಂಧೀಜಿಯವರು ಸ್ವತಂತ್ರ ಹೋರಾಟದಲ್ಲಿ ಶಾಲಾ ಮಕ್ಕಳು ಭಾಗವಹಿಸಬೇಕೆಂದು ಕರೆಕೊಟ್ಟಾಗ ಕಾರಂತರೂ ಚಳವಳಿಯಲ್ಲಿ ಭಾಗವಹಿಸಿದ್ದರು.
ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು.! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು.
ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಾಲವನ ಎಂಬ ಅಸಂಪ್ರದಾಯಿಕ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೆ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು!
ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ.
1925 ರಲ್ಲಿ ವಸಂತ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದ ಕಾರಂತರು ಅದರ ಸಂಪಾದಕರಾಗಿ ಸುಮಾರು ಐದು ವರ್ಷಗಳ ಕಾಲ ದುಡಿದರು.
ಕಾರಂತರ ಮೊದಲ ಕಾದಂಬರಿ ವಿಚಿತ್ರ ಕೂಟ ವು ಇದೇ ಪತ್ರಿಕೆಯ ಮೂಲಕ ಬೆಳಕು ಕಂಡಿತು.
ನಂತರ ಕಾರಣಾಂತರಗಳಿಂದ 1930ರಲ್ಲಿ ಈ ಪತ್ರಿಕೆಯು ನಿಂತು ಹೋಯಿತು.
1950ರಲ್ಲಿ ಅವರು ವಿಚಾರಮಣಿ ಎಂಬ ಮತ್ತೊಂದು ಪತ್ರಿಕೆಯನ್ನು ಆರಂಭಿಸಿದರಾದರೂ ಅದು ಬಹು ಕಾಲ ಉಳಿಯಲಿಲ್ಲ. ಮಕ್ಕಳ ಶಿಕ್ಷಣದಲ್ಲಿ ಕಾರಂತರಿಗೆ ತುಂಬಾ ಆಸಕ್ತಿ. ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ ಅವರು ಮಕ್ಕಳ ಪ್ರೀತಿಯ ಕಾರಂತಜ್ಜ ಎಂದೇ ಖ್ಯಾತರಾದರು.
ವಿಜ್ಞಾನದ ಅನೇಕ ಮುಖಗಳನ್ನು ಮಕ್ಕಳಿಗೆ ಪರಿಚಯಿಸಲು ಅವರು ಬರೆದ ಅದ್ಭುತ ಜಗತ್ತು, ಬಾಲ ಪ್ರಪಂಚ ಕನ್ನಡದ ಮಟ್ಟಿಗೆ ಅದ್ಭುತ ಏಕವ್ಯಕ್ತಿ ಜ್ಞಾನಕೋಶ.
ಕಾರಂತರು ಕೆಲಕಾಲ ತರಂಗ ಸಾಪ್ತಾಹಿಕದ ಬಾಲವನ – ಮಕ್ಕಳ ವಿಭಾಗದಲ್ಲಿ ಬಾಲವನದಲ್ಲಿ ಕಾರಂತಜ್ಜ ಎಂಬ ಕಾಲಂ ನಡೆಸಿ ಕೊಡುತ್ತಿದ್ದರು. ಇದು ಬಹಳವಾಗಿ ಜನಪ್ರಿಯವಾಗಿತ್ತು. ಪುಟಾಣಿಗಳು ಕಳುಹಿಸಿದ ವಿಜ್ಞಾನ ಕುರಿತ ಪ್ರಶ್ನೆಗಳಿಗೆ ಕಾರಂತರು ಮಕ್ಕಳಿಗೆ ರ್ಥವಾಗುವಂತೆ ಸರಳ ರೀತಿಯಲ್ಲಿ ಉತ್ತರ ನೀಡುತ್ತಿದ್ದರು. ಆಗಿನ ತಲೆಮಾರಿನ ಕನ್ನಡಿಗರಿಗೆ ಕಾರಂತರು, ಕಾರಂತಜ್ಜ’ ರೆಂದೇ ಚಿರಪರಿಚಿತ.
ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
ಸಾಹಿತಿಗಳಿಗೆ ಸಮಾಜದಲ್ಲಿ ಬೇರೆ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ. ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.
ಕಾರಂತರ ವಿಚಾರವಾದಗಳು ರೂಢಿಯನ್ನು ಮೀರಿ ಹೊಸ ದೃಷ್ಟಿಕೋನಗಳೆಡೆಗೆ ಮುಖಮಾಡುವಂತೆ ಮಾಡುತ್ತವೆ. ಅವನ್ನು ಅವರೇ ಹೇಳಿಕೊಳ್ಳುವಂತೆ., ರೂಢಿಗತ ಆಚರಣೆಗಳಿಂದ, ಪದ್ಧತಿಯಿಂದ ಹೊರ ಬಂದು, ವಿಚಾರ ವಾದಗಳಿಗೆ ತಮ್ಮ ಬುದ್ಧಿಮತ್ತೆಯನ್ನು ಒಡ್ಡಿಕೊಂಡಿದ್ದರು. ಈ ಮುಖೇನ ಹೊಸ ತಲೆಮಾರಿಗೆ ಹೊಸ ಸಂದೇಶವನ್ನು ರವಾನಿಸಿದರು.
ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಾಡಿದ ಕಾರಂತರು, ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ ಕಾರಂತಜ್ಜ ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾ ಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.
ಬರೋಬ್ಬರಿ 98 ವರ್ಷಗಳ ಕಾಲ ಬದುಕಿದ್ದ ಕಾರಂತರು, ತಮ್ಮ ಜೀವಿತಾವಧಿಯಲ್ಲಿ ಸುಮಾರು 427 ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು 47. ತಮ್ಮ 96ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು. ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು, ಬ್ಯಾಲೆಯಲ್ಲೂ ಕಲಿತು ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು.
1975ರಲ್ಲಿ ಭಾರತ ಸರ್ಕಾರವು ಕಾರಂತರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆದರೆ ಸರ್ಕಾರ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ ಅದನ್ನು ಕಾರಂತರು ವಿರೋಧಿಸಿ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿ ಪ್ರತಿಭಟಿಸಿದರು.
ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ(1930) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (1931) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ದೇಶಿಸಿದ್ದರು.
ಕಡಲ ತೀರದ ಭಾರ್ಗವ ಎಂದು ಪ್ರಖ್ಯಾತಿಯನ್ನು ಪಡೆದ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ 1902ರ ಅಕ್ಟೋಬರ್ 10ರಂದು ಜನಿಸಿದರು. ಇವರ ತಂದೆ ಶೇಷ ಕಾರಂತರು, ತಾಯಿ ಲಕ್ಶ್ಮೀಕಾರಂತರು. 9 ಮಕ್ಕಳ ಕುಟುಂಬದಲ್ಲಿ ಶಿವರಾಮ ಕಾರಂತರು 4ನೇಯ ಮಗ. ಶಿವರಾಮ ಕಾರಂತರ ಅಣ್ಣ ಮದರಾಸ್ ಸರಕಾರದಲ್ಲಿ ಸಚಿವರಾಗಿದ್ದರು. ಇನ್ನೊಬ್ಬ ಅಣ್ಣ ವಾಸುದೇವ ಕಾರಂತರು ಲೇಖಕರೂ, ಆಧ್ಯಾತ್ಮ ವಿಷಯಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಶೇಷ ಕಾರಂತರು ಶಾಲಾ ಶಿಕ್ಷಕರಾಗಿದ್ದು ದೊಡ್ದ ಕುಟುಂಬವನ್ನು ಸಾಕಲು ಅಸಾಧ್ಯವಾದಾಗ ಕೆಲಸ ಬಿಟ್ಟು ಜವಳಿ ಅಂಗಡಿ ಆರಂಭಿಸಿದರು.
ಇಂಗ್ಲೀಷರನ್ನು ಕಂಡರೆ ಅಸಹ್ಯಪಡುತಿದ್ದ ಕಾಲದಲ್ಲಿ ಶೇಷರು ಅವರ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳುಹಿಸಿದರು. ಕುಂದಾಪುರದ ಶಾಲೆಯಲ್ಲಿ 1920ರಲ್ಲಿ ಶಿವರಾಮ ಕಾರಂತರು ತಮ್ಮ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದು ಮುಗಿಸಿದರು. ತಮ್ಮ ಶಾಲೆಯಲ್ಲಿ ರಂಗರಾಯರು ಕಾರಂತರ ಮೊದಲ ಗುರುಗಳಾಗಿ ಕಾರಂತರಿಗೆ ಬೆಂಬಲ ನೀಡಿದರು. ಮುದ್ದಣ ಕವಿಯ ಗುರುವಾಗಿದ್ದ ಮಳಲಿ ಸುಬ್ಬರಾಯರು ಸಹ ಶಿವರಾಮ ಕಾರಂತರಿಗೆ ಗುರುವಾಗಿದ್ದರು. ಮಳಲಿ ಸುಬ್ಬರಾಯರು ಮೂಲತ: ಯಕ್ಷಗಾನ ರಚನೆ ಮಾಡಬಲ್ಲವರಾಗಿದ್ದು ಯಕ್ಷಗಾನದ ಬಗ್ಗೆ ಶಿವರಾಮರಿಗೆ ಆಸಕ್ತಿ ಮೂಡಲು ಮುಖ್ಯ ಕಾರಣರಾದರು.
ಶಿವರಾಮ ಕಾರಂತರಿಗೆ ಪರಿಸರವೆಂದರೆ ಬಹಳ ಪ್ರೀತಿ. ಅವರು ಬಾಲ್ಯದಲ್ಲಿ ಕೆರೆಗಳ ಬಳಿ, ಏರಿಗಳ ಬಳಿ, ಸಮುದ್ರತೀರ, ಮರದ ನೆರಳಿನ ಪ್ರದೇಶಗಳಲ್ಲಿ ಸಮಯವನ್ನು ಕಳೆಯುತ್ತಿದ್ದರು.
ನಿಸರ್ಗದ ಚೆಲುವಿನೊಂದಿಗೆ ಅವಿರತವಾಗಿ ಸಾಹಿತ್ಯ ಸೃಷ್ಟಿಸಿದವರು ಕಾರಂತರು. ದೂರದ ಕೋಟದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದು ಪ್ರಕೃತಿಯ ಮಡಿಲಿನಲ್ಲಿ ಜೀವನದ ಹೋರಾಟದೊಂದಿಗೆ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮಕಾರಂತರು 1997, ಡಿಸೆಂಬರ್ 9ರಂದು ನಿಧನ ಹೊಂದಿದರು.