ವಿದ್ಯಾಗಮ ಯೋಜನೆ ನಿಲ್ಲಿಸದಿದ್ದರೆ ಅಹೋರಾತ್ರಿ ಧರಣಿ – ಹೆಚ್.ಡಿ.ಕೆ.

ಬೆಂಗಳೂರು: ಸೋಮವಾರದೊಳಗೆ ವಿದ್ಯಾಗಮ ಯೋಜನೆಯನ್ನು ನಿಲ್ಲಿಸದಿದ್ದರೆ ನನ್ನ ಜೀವ ಹೋದರೂ ಪರ್ವಾಗಿಲ್ಲ, ಮಂಗಳವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ.ಕೆ., ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಯೋಜನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಹೆಚ್.ಡಿಕೆ ಒತ್ತಾಯಿಸಿದ್ದಾರೆ.
ಕೊರೋನಾ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯಾಗಮ ಶಿಕ್ಷಣದ ಹೆಸರಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಾವಿನ ಕಂದಕಕ್ಕೆ ನೂಕುತ್ತಿರುವ ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಬೇಡವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮಕ್ಕಳು ಮತ್ತು ಶಿಕ್ಷಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯಸರ್ಕಾರ ಸೋಮವಾರದೊಳಗೆ ವಿದ್ಯಾಗಮನ ಶಿಕ್ಷಣದ ಯಡವಟ್ಟನ್ನು ನಿಲ್ಲಿಸದಿದ್ದರೆ ವಿಧಾನಸೌಧ ಇಲ್ಲವೇ ಸ್ವಾತಂತ್ರ್ಯ ಉದ್ಯಾನದ ಬಳಿ ಅಹೋರಾತ್ರಿ ಧರಣಿ ಕೂರುವುದಾಗಿ ಅವರು ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದಾರೆ.
ವೇತನ ಹಾಗೂ ಸೌಲಭ್ಯಗಳ ಕಡಿತದ ಬೆದರಿಕೆವೊಡ್ಡಿ ಸಾವಿನ ದವಡೆಗೆ ನೂಕಿದ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಆ ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಅವರು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.