ಹಾಸನ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಶಿಕ್ಷಕಿ ಸ್ವರ್ಣ ಅವರ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ .ಗೋಪಾಲಯ್ಯ ಭರವಸೆ ನೀಡಿದರು .
ನಗರದ ಸತ್ಯಮಂಗಲ ವಾಸಿಯಾದ ಮೃತ ಶಿಕ್ಷಕಿ ಸ್ವರ್ಣ ನಿವಾಸಕ್ಕೆ ಸಚಿವರು ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಶಿಕ್ಷಕಿ ಸ್ವರ್ಣ ಅವರ ಪತಿ ಮಂಜುನಾಥ್ ದೇವಾಲಯದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದರು. ಅವರು ಮೃತಪಟ್ಟ ಕೆಲವೇ ದಿನದಲ್ಲಿ ಶಿಕ್ಷಕಿ ಸ್ವರ್ಣ ಅವರು ಸಾವಿಗೀಡಾಗಿದ್ದು ಇಬ್ಬರೂ ಸಹ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಆದ್ದರಿಂದ ಸರ್ಕಾರ ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಿದ್ದು ಅವರ ಒಬ್ಬರೇ ಪುತ್ರ ಧೀಮಂತ ಬಿಕಾಂ ಪದವಿದರರಾಗಿದ್ದು ಅವರಿಗೆ ಸರ್ಕಾರಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಿದ್ದೇನೆ ಎಂದರು.
ಆತುರವಾಗಿ ರಾಜ್ಯದಲ್ಲಿ ಶಾಲೆ-ಕಾಲೇಜು ಆರಂಭಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವುದಿಲ್ಲ ಎಂದ ಅವರು ಶಾಲಾ ಕಾಲೇಜು ಆರಂಭ ವಿಷಯದಲ್ಲಿ ಖಾಸಗಿಯವರೊಂದಿಗೆ ಸರ್ಕಾರ ಕೈ ಜೋಡಿಸಿಲ್ಲ ಹಾಗೂ ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ವಿಚಾರವನ್ನು ಸಹ ಪ್ರಸ್ತಾಪಿಸಿಲ್ಲ ಎಂದು ಹೇಳಿದರು.