ಮೈಸೂರು: ಈ ಬಾರಿ ಮೈಸೂರಲ್ಲಿ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಷ್ಟೇ ಆಚರಿಸಬೇಕೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಾಜಿ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.
ಪ್ರತಿ ವರ್ಷವೂ ಸುಮಾರು 60 ಲಕ್ಷ ಪ್ರವಾಸಿಗರು ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ದಸರಾ ಹಬ್ಬವು ಹೊರದೇಶದ ಪ್ರವಾಸಿಗರು ಹಾಗೂ ಮೈಸೂರಿನ ಸುತ್ತಮುತ್ತಲಿನ ಗ್ರಾಮದ ಜಿಲ್ಲೆಗಳ ಜನರನ್ನು ಆಕರ್ಷಿಸುವ ನಾಡಹಬ್ಬವಾಗಿದೆ.
ಆದರೆ ಈ ವರ್ಷ ದುರದೃಷ್ಟವಶಾತ್ ಕರೊನಾ ವೈರಸ್ ಪ್ರಪಂಚದಾದ್ಯಂತ ಬರಸಿಡಿಲಿನಂತೆ ಬಡಿದು ಭಾರತದಲ್ಲೂ ತೀವ್ರ ಆತಂಕ ಉಂಟು ಮಾಡಿದೆ.
ಮೈಸೂರು ನಗರ ಕರ್ನಾಟಕದಲ್ಲಿ ಅತಿ ಹೆಚ್ಚಿನ ಕರೊನಾ ಸೋಂಕಿತರನ್ನು ಹೊಂದಿರುವ ಎರಡನೇ ನಗರವಾಗಿದೆ.
ದಸರಾ ಹಬ್ಬ ನಡೆದರೆ ಸಾಮಾಜಿಕ ಅಂತರವಾಗಲಿ, ಮಾಸ್ಕ್ ಧರಿಸುವುದನ್ನಾಗಲಿ, ಸ್ವಚ್ಛತೆಯನ್ನಾಗಲಿ ಕಾಪಾಡಿಕೊಳ್ಳುವುದು ದುಸ್ತರ.
ಈ ಸಂದರ್ಭದಲ್ಲಿ ದಸರಾ ಎನ್ನುವುದು ಕರೊನಾ ಹರಡುವ ಹಬ್ಬವಾಗದಂತೆ ಹಾಗೂ ಮೈಸೂರು ಜಿಲ್ಲೆಯ ಜನರನ್ನು ಮಹಾಮಾರಿಯಿಂದ ಕಾಪಾಡುವಲ್ಲಿ ರಾಜ್ಯ ಸರ್ಕಾರ ಈ ವರ್ಷ ದಸರಾ ಹಬ್ಬವನ್ನು ಶಾಸ್ತ್ರ ಸಂಪ್ರದಾಯದಂತೆ ಚಾಮುಂಡಿ ಬೆಟ್ಟ ಮತ್ತು ಅರಮನೆಯ ಆವರಣದೊಳಗೆ ನಡೆಸಲಿ.
ಈ ಕಾರ್ಯಕ್ರಮಕ್ಕೆ ಯಾರನ್ನೂ ಆಹ್ವಾನಿಸದೇ ಇದ್ದರೆ ಜನರ ಆರೋಗ್ಯಕ್ಕೆ ಸರ್ಕಾರವು ನೀಡುವ ಬಹುದೊಡ್ಡ ಕೊಡುಗೆ ಆಗುವುದು ಎಂದು ಸುಧಾಕರ್ ಶೆಟ್ಟಿ ಸಿಎಂಗೆ ಪತ್ರ ಬರೆದಿದ್ದಾರೆ.