ರಾಜ್ಯ ಸರ್ಕಾರ ವಿರುದ್ಧ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಭಾನುವಾರ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.
ಕೊರೊನಾ ಸೋಂಕಿತರ ಪತ್ತೆ ಕಾರ್ಯ ಸರ್ಕಾರ ಸರಿಯಾಗಿ ನಡೆಸುತ್ತಿಲ್ಲ ಎಂದು ಅವರು ಸರ್ಕಾರದ ವಿರುದ್ಧ ಹರಿಹಾಯ್ದ, ಹೋಂ ಐಸೋಲೇಶನ್ ಸೋಂಕಿತರ ಮೇಲೆ ಸರ್ಕಾರ ನಿಗಾ ಇಡುತ್ತಿಲ್ಲ. ಇದರಿಂದ ಕೊರೊನಾ ದೊಡ್ಡ ಮಟ್ಟದಲ್ಲಿ ಹರಡುತ್ತಿದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಸಮರ್ಪಕವಾಗಿ ಚಿಕಿತ್ಸೆ ಸಿಗದೆ ಜನ ಸಾವಿಗೀಡಾಗುತ್ತಿದ್ದಾರೆ. ಸರ್ಕಾರ ಖಾಸಗಿ ಆಸ್ಪತ್ರೆಗಳ ಸಭೆ ಕರೆದು ಖಾಸಗಿ ಆಸ್ಪತ್ರೆಗಳು ಶೇ. 50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಕಾಯ್ದಿರಿಸಿ, ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ ಸಹಕರಿಸಬೇಕು. ಸಹಕರಿಸದವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮೈಸೂರಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ದಸರಾ ಆಚರಿಸುವುದು ಸರಿಯಲ್ಲ. ದಸರಾ ಹೆಸರಲ್ಲಿ ಸರ್ಕಾರ ಹಣ ಲೂಟಿ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಪ್ರತಿಭಟನಾಕಾರರು ದೂರಿದರು.
ಐವತ್ತು ಜನ ಸೇರಿಸಿ ಮದುವೆ ಮಾಡಿದರೆ ಕೊರೊನಾ ಬರುತ್ತದೆ. ಆದರೆ ಸರ್ಕಾರ ನೂರಾರು ಜನರನ್ನು ಸೇರಿಸಿ ದಸರಾ ಮಾಡಿದರೆ ಕೊರೊನಾ ಬರುವುದಿಲ್ಲವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ದಸರಾ ದೀಪಾಲಂಕಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುವುದನ್ನು ಬಿಟ್ಟು ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಿ, ಜನರು ಕೊರೊನಾದಿಂದ ಚಿಕಿತ್ಸೆಯಿಲ್ಲದೆ ಸಾಯುತ್ತಿರುವುದನ್ನು ನಿಲ್ಲಿಸಬೇಕೆಂದು ಅವರು ಹೇಳಿದರು.
ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ವಿಜಯೇಂದ್ರ, ಕುಮಾರ್ ಗೌಡ, ಪ್ರಜೀಶ್. ಪಿ, ಶಾಂತಮೂರ್ತಿ, ಬಂಗಾರಪ್ಪ, ನಂಜುಂಡಸ್ವಾಮಿ, ದರ್ಶನ್ ಗೌಡ, ಮನು ನಾಯಕ್, ಮಲ್ಲೇಶ್, ಸೋಮಶೇಖರ್, ಸುಂದರಪ್ಪ, ಗುರಮಲ್ಲಪ್ಪ, ಆನಂದ್, ಶರತ್ ಕುಮಾರ್, ಕೃಷ್ಣ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.