ಕೋವಿಡ್ ನಿಯಂತ್ರಿಸಿ, ಸಾವಿನ ಪ್ರಕರಣ ತಗ್ಗಿಸುವುದು ಮೊದಲ ಆದ್ಯತೆ -ಸಚಿವ ಸುಧಾಕರ್

ಬೆಂಗಳೂರು, ಅ. 12- ರಾಜ್ಯದಲ್ಲಿ ಎದುರಾಗಿರುವ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವುದು ಮತ್ತು ಸಾವಿನ ಪ್ರಕರಣವನ್ನು ತಗ್ಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಆದಿಚುಂಚನಗಿರಿ ಶಾಖಾಮಠಕ್ಕೆ ಸೋಮವಾರ ಭೇಟಿ ನೀಡಿ, ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಆರೋಗ್ಯ ಇಲಾಖೆಯಂತಹ ಪ್ರಮುಖ ಜವಾಬ್ದಾರಿಯನ್ನು ನನ್ನ ಮೇಲೆ ವಿಶ್ವಾಸವಿಟ್ಟು ಮುಖ್ಯಮಂತ್ರಿಗಳು ಹಾಗೂ ವರಿಷ್ಠರು ನೀಡಿದ್ದಾರೆ. ಜನರ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿ ನನ್ನ ಮೇಲಿದ್ದು, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಅದನ್ನು ನಿಭಾಯಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಈ ಹಿಂದೆ ಈ ಖಾತೆ ನೋಡಿಕೊಳ್ಳುತ್ತಿದ್ದ ಶ್ರೀರಾಮುಲು ಅವರೊಂದಿಗೂ ಮಾತುಕತೆ ನಡೆಸಿದ್ದೇನೆ. ಅವರು ಯಾವುದೇ ಬೇಸರ ವ್ಯಕ್ತಪಡಿಸಿಲ್ಲ ಎಂದರು.
ಸಮಾಜ ಕಲ್ಯಾಣ ಇಲಾಖೆಯನ್ನು ಶ್ರೀರಾಮುಲು ಅವರಿಗೆ ವಹಿಸಲಾಗುತ್ತಿದೆ. ಅದು ಸಹ ಪ್ರಮುಖ ಜವಾಬ್ದಾರಿಯಾಗಿದ್ದು, ಅವರು ಕೂಡ ಸಮ್ಮತಿಸಿದ್ದಾರೆ. ಈ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದವರು ತಿಳಿಸಿದರು.