ಆರೋಗ್ಯ ಇಲಾಖೆ ಸುಧಾರಣೆಗೆ ಕೇರಳ ನಮಗೆ ಮಾದರಿ -ಸಚಿವ ಡಾ. ಸುಧಾಕರ್

ಮೈಸೂರು, ಅ. 12- ಆರೋಗ್ಯ ಇಲಾಖೆ ಸುಧಾರಣೆಗೆ ಕೇರಳ ನಮಗೆ ಮಾದರಿ ಆಗಬೇಕು ಎಂದು ಸಚಿವ ಸುಧಾಕರ್ ಹೇಳಿದರು.
ನಗರದಲ್ಲಿ ಸೋಮವಾರ ಸಚಿವರು ಮಾಧ್ಯಮ ಪ್ರತಿನಿಧೀಗಳೊಂದಿಗೆ ಮಾತನಾಡಿದರು.
ಸಾಮಾಜಿಕ ಆರೋಗ್ಯ ವ್ಯವಸ್ಥೆ ಸಾಕಷ್ಟು ಸುಧಾರಣೆ ಆಗಬೇಕಿದೆ ಎಂದು ಅವರು ತಿಳಿಸಿದರು.
ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ರಚನಾತ್ಮಕ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನನಗೆ ಮಹತ್ವದ ಜವಾಬ್ದಾರಿ ಇದೆ ಎಂದವರು ಹೇಳಿದರು.
ಮೊದಲು ಕೋವಿಡ್ ಸಾವಿನ ಪ್ರಮಾಣ ಶೇ. 1ಕ್ಕೆ ಇಳಿಸಬೇಕಿದೆ. ಯಾರಿಗೆ ಸೋಂಕು ತಗುಲಿದರೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು 24 ಗಂಟೆ ಒಳಗೆ ಪತ್ತೆ ಹಚ್ಚುವ ಕೆಲಸ ಮಾಡಬೇಕು. ಹಾಗಾದಾಗ ನಾವು ಸಾವಿನ ಪ್ರಮಾಣ ಕಡಿಮೆ ಮಾಡಬಹುದು ಎಂದು ಸಚಿವ ಡಾ. ಸುಧಾಕರ್ ತಿಳಿಸಿದರು.
ಆರೋಗ್ಯ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ ಇರಬೇಕು. ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಆರೋಗ್ಯ ಇಲಾಖೆ ಒಂದೇ ಇದೆ. ಆದರೆ ಕರ್ನಾಟಕದಲ್ಲಿ ಬಹು ವರ್ಷಗಳ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಬೇರೆ ಬೇರೆ ಮಾಡಿದ್ದರು ಎಂದವರು ತಿಳಿಸಿದರು.
ಹಿಂದೆಲ್ಲ ಸಚಿವರ ಸಂಖ್ಯೆಗೆ ಸೀಲಿಂಗ್ ಇರಲಿಲ್ಲ. ಹಾಗಾಗಿ ಸಚಿವ ಸಂಖ್ಯೆ ಹೆಚ್ಚಾದಂತೆ ಇಲಾಖೆಗಳನ್ನ ವಿಭಜನೆ ಮಾಡಿಕೊಳ್ಳಲಾಗಿತ್ತು ಎಂದರು.
ತಾಂತ್ರಿಕವಾಗಿ ಈ ಎರಡು ಇಲಾಖೆ ಒಂದೆ ಆಗಿರಬೇಕು ಎಂದು ಸಚಿವ ಸುಧಾಕರ್ ಹೇಳಿದರು.