ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಸಿಕ್ಕ ಗೌರವ -ಡಾ.ಮಂಜುನಾಥ್

ಬೆಂಗಳೂರು: ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಸಿಕ್ಕ ಗೌರವ ಇದಾಗಿದೆ ಎಂದು ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೋಮವಾರ ದಸರಾ ಮಹೋತ್ಸವ ಉದ್ಘಾಟಕರಾದ ಡಾ. ಮಂಜುನಾಥ್ ಅವರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮುಂಜುನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದಸರಾ ಉದ್ಘಾಟನೆಗೆ ಪ್ರಪ್ರಥಮ ಬಾರಿಗೆ ಕೊರೋನಾ ವಾರಿಯರ್ಸ್ ಆದ ವೈದ್ಯರೊಬ್ಬರನ್ನು ಆಹ್ವಾನಿಸಲಾಗುತ್ತಿದೆ. ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಸಿಕ್ಕ ಗೌರವ ಇದಾಗಿದೆ. ಇದರಿಂದ ನನಗೆ ತುಂಬಾ ಸಂತಸವಾಗುತ್ತಿದೆ ಎಂದರು.
ಇದು ನನ್ನೊಬ್ಬನಿಗೆ ಸಿಕ್ಕ ಗೌರವ ಅಲ್ಲ. ಇಡೀ ವೈದ್ಯ ಸಮುದಾಯಕ್ಕೆ ಸಿಕ್ಕ ಮಾನ್ಯತೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಾದ ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಾ. ಸಿ. ಎನ್. ಮಂಜುನಾಥ್ ತಿಳಿಸಿದರು.
ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸುವ ಸಲುವಾಗಿ ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ನನ್ನನ್ನು ಆಹ್ವಾನ ಮಾಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರಿಗೆ ಆಹ್ವಾನ ನೀಡಿದ್ದಾರೆ. ಸರ್ಕಾರದ ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ದಸರಾ ಸೇರಿದಂತೆ ನಾಡಿನ ಜನತೆ ಎಲ್ಲ ಕಡೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಮ್ಮ ಹತ್ತಿರ ನಿಖರ ಔಷಧಗಳು ಇಲ್ಲ. ಹೀಗಾಗಿ ಕೊರೋನಾ ಜೊತೆಯಲ್ಲೇ ನಾವಿರಬೇಕಾದ್ದರಿಂದ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಕರೆ ನೀಡಿದರು.
ಪಿಯುಸಿ, ಎಂಡಿ ಸೇರಿದಂತೆ ಶಿಕ್ಷಣದ ಹಲವು ಘಟ್ಟಗಳನ್ನು ಮೈಸೂರಿನಲ್ಲಿ ಕಂಡಿದ್ದೇನೆ. ಆಗೆಲ್ಲ ದಸರಾವನ್ನು ಸಂಭ್ರಮದಿಂದ ನೋಡುತ್ತಿದ್ದೆ. ಕಳೆದ ಎರಡು ವರ್ಷದ ಹಿಂದೆಯೂ ಸಹ ಸ್ನೇಹಿತರೊಡನೆ ಬಂದು ದಸರಾ ವೀಕ್ಷಣೆ ಮಾಡಿದ್ದೆ. ಆದರೆ, ಈಗ ನಾನೇ ಉದ್ಘಾಟನೆಗೆ ಆಗಮಿಸುತ್ತಿರುವುದು ಖುಷಿ ತಂದಿದೆ. ಜಂಬೂಸವಾರಿ, ಮೈಸೂರು ಅರಮನೆ, ಚಾಮುಂಡಿ ಬೆಟ್ಟದಿಂದ ನಿಂತು ಲೈಟಿಂಗ್ಸ್ ನೋಡವುದೇ ಒಂದು ಆನಂದ ಎಂದು ಡಾ. ಮಂಜುನಾಥ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.