ಮೈಸೂರು: ಕೋವಿಡ್-19 ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆಯನ್ನು ಹೆಚ್ಚಿಸಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದರು.
ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮೈಸೂರು ಜಿಲ್ಲೆಯ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಉಂಟಾಗದಂತೆ ಎಚ್ಚರವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಅಳವಡಿಸಿ ಚಿಕಿತ್ಸೆ ಪ್ರಮಾಣವನ್ನು ಹೆಚ್ಚಿಸಬೇಕು ಹಾಗೂ ಸೋಂಕು ಧೃಡಪಟ್ಟ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಕ್ರಮ ಕೈಗೊಳ್ಳಿ ಎಂದರು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟಲು ಈಗಾಗಲೇ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಅದರಂತೆ ಪರೀಕ್ಷೆ ವರದಿಯನ್ನು ತ್ವರಿತವಾಗಿ ನೀಡಲು ಲ್ಯಾಬ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳ ಕೊರತೆ ಉಂಟಾಬಾರದು. ಅಗತ್ಯ ಸಿಬ್ಬಂದಿಗಳನ್ನು ಒದಗಿಸಲು ಇಲಾಖೆಯಿಂದ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಪ್ರತಿ ದಿನದ ವರದಿಯನ್ನು ನೀಡಬೇಕು ಎಂದು ಸೂಚಿಸಿದರು.
ಆಸ್ಪತ್ರೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಔಷಧಿಗೆ ಅಭಾವ ಉಂಟಾಗದಂತೆ ಎಚ್ಚರವಹಿಸಬೇಕು. ನಿಗದಿತ ಸಮಯಕ್ಕೆ ಔಷಧಿ ದೊರಕುವಂತೆ ಕ್ರಮವಹಿಸಿ, ಪ್ರತಿ ಆಸ್ಪತ್ರೆಗಳಲ್ಲಿ ಅಗತ್ಯವಿರುವಷ್ಟು ಔಷಧಿಗಳನ್ನು ಶೇಖರಿಸಿಡಬೇಕು ಎಂದು ತಿಳಿಸಿದರು.
ಹೋಂ ಐಶೊಲೇಶನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು. ಅಗತ್ಯವಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಬೇಕು ಎಂದು ಸಂಬಂಧಿಸಿದ ನೋಡೆಲ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ. ಜಾವೇದ್ ಆಕ್ತರ್, ರಾಜ್ಯ ಕೋವಿಡ್ ವಾರ್‍ರೂಮ್ ಉಸ್ತುವಾರಿ ಮನೀಶ್ ಮೌದ್ಗಿಲ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾಪಂಚಾಯತ್ ಸಿಇಒ ಡಿ.ಭಾರತಿ, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥ್ ಸ್ವಾಮಿ ಇತರರು ಉಪಸ್ಥಿತರಿದ್ದರು.