ಯಾವುದೇ ಉಪನ್ಯಾಸಕರ ಹುದ್ದೆಗೆ ತೊಂದರೆ ಇಲ್ಲ -ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಯಾವುದೇ ಉಪನ್ಯಾಸಕರ ಹುದ್ದೆಗೆ ತೊಂದರೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಚಿವ ಸುರೇಶ್ ಕುಮಾರ್ ಅವರು ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಉಪನ್ಯಾಸಕರ ಹುದ್ದೆಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಬೇಕಾದರೆ ಮಾಡಲಾಗುತ್ತದೆ ಎಂದು ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ.
ಹಾಗಾಗಿ ಯಾವುದೇ ಉಪನ್ಯಾಸಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಚಿವ ಸುರೇಶ್ ಕುಮಾರ್ ಅವರು ಹೀಗೆ ಬರೆದಿದ್ದಾರೆ: ಪಿಯುಸಿ ಉಪನ್ಯಾಸಕರಾಗಿ ಆಯ್ಕೆಗೊಂಡಿರುವ ಮತ್ತು ಕೌನ್ಸೆಲಿಂಗ್ ಸಹ ಪೂರ್ಣವಾಗಿರುವ ಉಪನ್ಯಾಸಕರು ನೇಮಕಾತಿ ಆದೇಶಕ್ಕಾಗಿ ಧರಣಿ ಕೂತಿರುವ ವಿಚಾರ ನನಗೆ ತಿಳಿದುಬಂದಿದೆ.
ನಾನು ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಈ ಮೂಲಕ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಲು ಇಚ್ಚಿಸುತ್ತೇನೆ.
2019 ಆಗಸ್ಟ್ 21 ರಂದು, ಅಂದರೆ ನಾನು ಪ್ರಮಾಣವಚನ ಸ್ವೀಕರಿಸಿದ ಮಾರನೆಯದಿನ (ಆದರೆ ಇನ್ನೂ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ನನಗೆ ನೀಡುವ ಮುನ್ನವೇ) ನಾನು 2015ರಿಂದ ವಿಳಂಬವಾಗುತ್ತಿದ್ದ ಈ ಉಪನ್ಯಾಸಕರ ಪರೀಕ್ಷೆ ಫಲಿತಾಂಶವನ್ನು ಪ್ರಕಟ ಮಾಡುವಂತೆ ಕ್ರಮ ತೆಗೆದುಕೊಂಡ ನಂತರ ಈ ವಿಚಾರ ಅನೇಕ ಅಡೆತಡೆಗಳನ್ನು ಎದುರಿಸಿತು.
ನನ್ನ ಪ್ರತಿ ಪ್ರಯತ್ನ ಈ ಎಲ್ಲಾ ನೂತನ ಉಪನ್ಯಾಸಕರಿಗೆ ತಿಳಿದಿದೆ.
ಆರ್ಥಿಕ ಇಲಾಖೆಯ ನಿರ್ಬಂಧ ಇದ್ದರೂ ಸಹ ಇವರೆಲ್ಲರಿಗೂ ಕೌನ್ಸೆಲಿಂಗ್ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗಿದೆ.
ಈಗ ಕಾಲೇಜುಗಳು ಪ್ರಾರಂಭವಾದ ತಕ್ಷಣ ನೇಮಕಾತಿ ಆದೇಶ ಕೊಡಲಾಗುವುದು ಎಂದು ಈ ಎಲ್ಲಾ ನೂತನ ಉಪನ್ಯಾಸಕರುಗಳಿಗೆ ಮುಂಚೆಯೇ ತಿಳಿಸಲಾಗಿತ್ತು.
ಉಪನ್ಯಾಸಕರಾಗಿ ಆಯ್ಕೆಯಾಗಿ ಒಂದು ವರ್ಷದ ಒಳಗೆ ನೇಮಕಾತಿ ಆದೇಶ ದೊರೆಯದಿದ್ದರೆ ಆ ಆಯ್ಕೆ ಪಟ್ಟಿ ರದ್ದಾಗುತ್ತದೆ ಎಂಬ ಆತಂಕ ಈ ನೂತನ ಉಪನ್ಯಾಸಕರಿಗಿದೆ.
ಯಾವುದೇ ಉಪನ್ಯಾಸಕರ ಹುದ್ದೆಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಬೇಕಾದರೆ ಮಾಡಲಾಗುತ್ತದೆ. ಆತಂಕಪಡುವ ಅಗತ್ಯವಿಲ್ಲ.