ಆರ್. ಆರ್. ನಗರ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ಅನುಮತಿ

ಬೆಂಗಳೂರು: ಆರ್. ಆರ್. ನಗರ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಮುನಿರತ್ನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದ ತುಳಸಿ ಮುನಿರಾಜು ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಆರ್. ಆರ್. ನಗರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ ಗೆಲುವು ಸಾಧಿಸಿದ್ದರು.
ಆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಗೌಡ ಆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿರುವ ಸುಪ್ರೀಂ ಕೋರ್ಟ್ ಉಪಚುನಾವಣೆ ನಡೆಸಲು ಅನುಮತಿ ನೀಡಿದೆ.
ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ ಆರ್. ಆರ್. ನಗರ ಉಪಚುನಾವಣೆಗೆ ಅನುಮತಿಸಿದೆ.
ಆಪರೇಷನ್ ಕಮಲಕ್ಕೆ ಒಳಗಾದ ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
2018ರ ಚುನಾವಣಾ ಅಕ್ರಮದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದ್ದುದರಿಂದ ಮುನಿರತ್ನ ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿರಲಿಲ್ಲ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ ನ. 3ರಂದು ಉಪಚುನಾವಣೆ ಘೋಷಣೆ ಮಾಡಲಾಗಿದೆ.
ಆರ್.ಆರ್. ನಗರದ ಅಭ್ಯರ್ಥಿಯಾಗಿ ಇತ್ತೀಚೆಗೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಐಎಎಸ್ ಅಧಿಕಾರಿ ದಿ. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಸ್ಪರ್ಧಿಸಲಿದ್ದಾರೆ.
ಬಿಜೆಪಿಯಿಂದ ಮುನಿರತ್ನ ಸ್ಪರ್ಧಿಸುತ್ತಾರಾ ಅಥವಾ ತುಳಸಿ ಮುನಿರಾಜು ಗೌಡ ಸ್ಪರ್ಧಿಸುತ್ತಾರಾ ಎಂಬದು ಇನ್ನೂ ಅಂತಿಮ ನಿರ್ಧಾರವಾಗಿಲ್ಲ.