ಮೈಸೂರು, ಅ. 13- ಆಟೋದಲ್ಲಿ ಬಂದು ಮೊಬೈಲ್ ಕಿತ್ತುಕೊಂಡು ಹೋಗುತ್ತಿದ್ದ ಆರೋಪಿಗಳನ್ನು ನಗರದ ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಯರಗನಹಳ್ಳಿ ವಾಸಿ ವೆಂಕಟೇಶ್ (25) ಮತ್ತು ಲಲಿತಾದ್ರಿಪುರ ಗ್ರಾಮದ ಕೆ. ಸಂಜಯ್ (21) ಬಂಧಿತ ಆರೋಪಿಗಳು.
ಬಂಧಿತರಿಂದ ಪೊಲೀಸರು ರೂ. 1,50,000 ಮೌಲ್ಯದ 2 ಮೊಬೈಲ್ ಫೋನ್‍ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ.
ಅ. 7ರಂದು ಶ್ರೀನಂಜುಂಡಸ್ವಾಮಿ ಎಂಬುವವರು ಟಿ.ಎನ್.ಪುರ ಮುಖ್ಯರಸ್ತೆಯ ವಜ್ರೇಗೌಡ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಆಟೋದಲ್ಲಿ ಬಂದ ತಂಡ ನಂಜುಂಡಸ್ವಾಮಿರವರಿಂದ ರೆಡ್‍ಮಿ ಮೊಬೈಲ್ ಫೋನ್ ಕಿತ್ತುಕೊಂಡು ಹೋಗಿರುವ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಪತ್ತೆ ಸಂಬಂಧ ಆಲನಹಳ್ಳಿ ಪೊಲೀಸರು ಅ. 10ರಂದು ಇಬ್ಬರು ಆರೋಪಿಗಳನ್ನು ಆಟೋ ಸಮೇತ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಈ ಆರೋಪಿಗಳು ಇತರೇ ಸಹಚರರಾದ ಅಭಯ್, ರೂಪೇಶ್, ಜಯಕುಮಾರ್ ರವರುಗಳೊಂದಿಗೆ ಸೇರಿಕೊಂಡು ಆಟೋದಲ್ಲಿ ಓಡಾಡುತ್ತಾ ಒಂಟಿಯಾಗಿ ನಡೆದುಕೊಂಡು ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುವವರ ಮೊಬೈಲ್‍ಗಳನ್ನು ಕಿತ್ತುಕೊಳ್ಳುತ್ತಿದ್ದೆವು ಎಂದು ತಿಳಿಸಿದ್ದಾರೆ.
ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ. 6ರಂದು ಎಸ್.ವಿ.ಪಿ ನಗರದ ಪಕ್ಕದ ಯಾಂದಹಳ್ಳಿ ಬಳಿ ಒಂದು ಆಪಲ್ ಐ ಪೋನ್ ಅನ್ನು ಸುಲಿಗೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ.
ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಮೈಸೂರು ನಗರ ಡಿ.ಸಿ.ಪಿ. ಗೀತಪ್ರಸನ್ನ, ದೇವರಾಜ ವಿಭಾಗದ ಎ.ಸಿ.ಪಿ. ಶಶಿಧರ್ ರವರ ನೇತೃತ್ವದಲ್ಲಿ ಆಲನಹಳ್ಳಿ ಪಿ.ಐ. ಹರಿಯಪ್ಪ ಮತ್ತು ಪಿ.ಎಸ್.ಐ ಮಹೇಂದ್ರ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀಧರ್, ಸಿಬ್ಬಂದಿಗಳಾದ ಶಿವಪ್ರಸಾದ್, ರವಿಕುಮಾರ್, ಸಿದ್ದರಾಜು, ರಂಗನಾಥ ಅವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.